ರಾಂಚಿ: ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ನಡೆಸುವ ಇಂಟರ್ ಮೀಡಿಯೇಟ್ ಪರೀಕ್ಷೆಗೆ ಶಿಕ್ಷಣ ಸಚಿವ ಜಗರ್‌ನಾಥ್ ಮಹ್ತೊ ಅವರು ಹಾಜರಾಗಲಿದ್ದಾರೆ. ಕಳೆದ ವರ್ಷ ಕೋವಿಡ್ ಸೋಂಕು ಬಾಧಿಸಿದ್ದರಿಂದ ಪರೀಕ್ಷೆ ಬರೆಯಲು ಮಹ್ತೊ ಅವರಿಗೆ ಸಾಧ್ಯವಾಗಿರಲಿಲ್ಲ.
ರಾಂಚಿ: ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ನಡೆಸುವ ಇಂಟರ್ ಮೀಡಿಯೇಟ್ ಪರೀಕ್ಷೆಗೆ ಶಿಕ್ಷಣ ಸಚಿವ ಜಗರ್‌ನಾಥ್ ಮಹ್ತೊ ಅವರು ಹಾಜರಾಗಲಿದ್ದಾರೆ. ಕಳೆದ ವರ್ಷ ಕೋವಿಡ್ ಸೋಂಕು ಬಾಧಿಸಿದ್ದರಿಂದ ಪರೀಕ್ಷೆ ಬರೆಯಲು ಮಹ್ತೊ ಅವರಿಗೆ ಸಾಧ್ಯವಾಗಿರಲಿಲ್ಲ.
54 ವರ್ಷದ ಸಚಿವ ಮಹ್ತೊ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷದ ದುಮ್ರಿ ಕ್ಷೇತ್ರದ ಶಾಸಕರು. 10ನೇ ತರಗತಿ ಪಾಸ್ ಆಗಿರುವ ಮಹ್ತೊ ಅವರು ಹೇಮಂತ್ ಸೊರೇನ್ ನೇತೃತ್ವದ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾದ ಬೆನ್ನಲ್ಲೇ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಮಹ್ತೊ 2020ರಲ್ಲಿ ಬೊಕಾರೊ ಜಿಲ್ಲೆಯ ದೇವಿ ಮಹ್ತೊ ಇಂಟರ್ ಕಾಲೇಜಿನಲ್ಲಿ ಪ್ರಥಮ ಪಿಯುಗೆ ಸೇರಿದ್ದರು.
'ವಯಸ್ಸು ದೊಡ್ಡ ವಿಚಾರವಲ್ಲ, ಕಲಿಕೆಗೆ ವಯಸ್ಸಿನ ಹಂಗಿಲ್ಲ' ಎಂದು ಹುಮ್ಮಸ್ಸಿನಿಂದ ಹೇಳುವ ಮಹ್ತೊ ಕೊರೊನಾ ಸೋಂಕನ್ನು ಗೆದ್ದು ಬಂದಿದ್ದಾರೆ. ಕೆಲಕಾಲ ಕೋಮಾದಲ್ಲಿದ್ದರು. ಮಹ್ತೊ ಅವರನ್ನು ಏರ್‌ಲಿಫ್ಟ್ ಮೂಲಕ ಚೆನ್ನೈಗೆ ಸಾಗಿಸಿ, ಯಶಸ್ವಿ ಶ್ವಾಸಕೋಶ ಕಸಿ ಚಿಕಿತ್ಸೆ ಮಾಡಲಾಗಿತ್ತು. ಸುಮಾರು 9 ತಿಂಗಳ ಕಾಲ ಚಿಕಿತ್ಸೆ ಪಡೆದ ನಂತರ ಮಹ್ತೊ ಅವರು ಜಾರ್ಖಂಡ್‌ಗೆ ವಾಪಸ್ ಆಗಿದ್ದರು. ನಂತರ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು.
ಈ ವರ್ಷದ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.
ಎರಡು ದಶಕಗಳಿಂದ ತಾತ್ಕಾಲಿಕ ಸೇವೆಯಲ್ಲಿದ್ದ ಸುಮಾರು 65,000 ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮೆಹ್ತೊ ಅವರು ಸುದ್ದಿಯ ಮುನ್ನೆಲೆಗೆ ಬಂದಿದ್ದರು.
ಸಚಿವರೇ ಉದ್ಘಾಟಿಸಿದ ಕಾಲೇಜು: ಮಹ್ತೊ 2005ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2006ರಲ್ಲಿ ದೇವಿ ಮಹ್ತೊ ಕಾಲೇಜನ್ನು ಇವರೇ ಉದ್ಘಾಟಿಸಿದ್ದರು. ಕಾಕತಾಳೀಯವೆಂಬಂತೆ ಈಗ ಮಹ್ತಾ ಅವರು ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಶಿಕ್ಷಣ ಮುಂದುವರಿಸಿದ್ದಾರೆ.