ಬೊಕಾರೊ: ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ಚೇತರಿಸಿಕೊಳ್ಳದೇ ಹಾಸಿಗೆ ಹಿಡಿದಿದ್ದ ಜಾರ್ಖಂಡ್‌ನ 55 ವರ್ಷದ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ನಂತರ ನಡೆಯಲು ಮತ್ತು ಮಾತನಾಡಲು ಪ್ರಾರಂಭಿಸಿದರು ಎಂದು ವೈದ್ಯರು ಗುರುವಾರ ಹೇಳಿದ್ದಾರೆ.
"ಈ ಪವಾಡ ಚೇತರಿಕೆ"ಯಿಂದ ದಿಗ್ಭ್ರಮೆಗೊಂಡ ಜಾರ್ಖಂಡ್ ಸರ್ಕಾರ, ತನಿಖೆಗಾಗಿ ಮೂವರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಬೊಕಾರೊ ಜಿಲ್ಲೆಯ ಪೀಟರ್‌ವಾರ್ ಬ್ಲಾಕ್‌ನ ಉತ್ತರಾಸರಾ ಪಂಚಾಯತ್ ವ್ಯಾಪ್ತಿಯ ಸಲ್ಗಾಡಿಹ್ ಗ್ರಾಮದ ನಿವಾಸಿ ದುಲರ್‌ಚಂದ್ ಮುಂಡಾ ಅವರು ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದರು ಮತ್ತು ಅವರಿಗೆ ನಡೆಯಲು ಹಾಗೂ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ಜನವರಿ 4ರಂದು "ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮುಂಡಾಗೆ ಕೋವಿಶೀಲ್ಡ್ ಲಸಿಕೆಯನ್ನು ಅವರ ಮನೆಯಲ್ಲಿ ನೀಡಿದರು. ಮರುದಿನ, ಮುಂಡಾ ಅವರನ್ನು ನೋಡಿದ ಕುಟುಂಬ ಸದಸ್ಯರಿಗೆ ಆಶ್ಟರ್ಯ ಕಾದಿತ್ತು. ಮುಂಡಾ ನಡೆದಾಡಲು ಆರಂಭಿಸಿದರು ಮತ್ತು ಮಾತನ್ನು ಮರಳಿ ಪಡೆದರು" ಎಂದು ಪೀಟರ್ವಾರ್ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ ಅಲ್ಬೆಲಾ ಕೆರ್ಕೆಟ್ಟಾ ಅವರು ಹೇಳಿದ್ದಾರೆ.
"ಈ ಪವಾಡ ಚೇತರಿಕೆ" ಬಗ್ಗೆ ಅಧ್ಯಯನ ನಡೆಸಲು ಮೂರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಲಾಗಿದೆ ಎಂದು ಬೊಕಾರೊದ ಸಿವಿಲ್ ಸರ್ಜನ್ ಡಾ ಜಿತೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.
ಬೆನ್ನುಮೂಳೆಯ ಸಮಸ್ಯೆಯಿಂದ ಮುಂಡಾ ಕಳೆದ ಒಂದು ವರ್ಷದಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.