ದುಬೈ: ಕೋವಿಡ್-19ನಿಂದಾಗಿ ಶ್ವಾಸಕೋಶಗಳು ಗಂಭೀರವಾಗಿ ಹಾನಿಗೊಳಗಾಗಿ, ಆರು ತಿಂಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭಾರತೀಯ ಮುಂಚೂಣಿ ಕಾರ್ಯಕರ್ತರೊಬ್ಬರು ಪವಾಡಸದೃಶವಾಗಿ ಚೇತರಿಸಿಕೊಂಡಿದ್ದಾರೆ.
ದುಬೈ: ಕೋವಿಡ್-19ನಿಂದಾಗಿ ಶ್ವಾಸಕೋಶಗಳು ಗಂಭೀರವಾಗಿ ಹಾನಿಗೊಳಗಾಗಿ, ಆರು ತಿಂಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭಾರತೀಯ ಮುಂಚೂಣಿ ಕಾರ್ಯಕರ್ತರೊಬ್ಬರು ಪವಾಡಸದೃಶವಾಗಿ ಚೇತರಿಸಿಕೊಂಡಿದ್ದಾರೆ.
ಕೇರಳದ ಅರುಣಕುಮಾರ್ ಎಂ.ನಾಯರ್ ಎಂಬುವವರೇ ಕೋವಿಡ್-19 ವಿರುದ್ಧ ಹೋರಾಡಿ, ಸಾವನ್ನು ಗೆದ್ದವರು. ಅವರನ್ನು ಗುರುವಾರ ಮನೆಗೆ ಕಳುಹಿಸಲಾಯಿತು.
ಅರುಣಕುಮಾರ್ ಅವರು ಅಬುಧಾಬಿಯಲ್ಲಿರುವ ಎಲ್‌ಎಲ್‌ಎಚ್ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಕಳೆದ ವರ್ಷ ಜುಲೈನಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತು.
ಕೆಲ ದಿನಗಳ ನಂತರ ಅವರ ಆರೋಗ್ಯ ಹದಗೆಟ್ಟು, ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಅವರ ಶ್ವಾಸಕೋಶಗಳು ಗಂಭೀರ ಸೋಂಕಿಗೆ ಒಳಗಾಗಿರುವುದು ಪರೀಕ್ಷೆಯಿಂದ ಗೊತ್ತಾಯಿತು. ನಂತರ ಜುಲೈ 31ರಂದು ಅವರಿಗೆ ಕೃತಕ ಶ್ವಾಸಕೋಶ ವ್ಯವಸ್ಥೆ (ಇಸಿಎಂಒ ಯಂತ್ರ) ಅಳವಡಿಸಿ, ಚಿಕಿತ್ಸೆ ಮುಂದುವರಿಸಲಾಯಿತು.
ಕೋವಿಡ್ ಪಿಡುಗಿನ ವೇಳೆ ಸಲ್ಲಿಸಿದ ಸೇವೆ ಹಾಗೂ ಹೋರಾಟ ಮನೋಭಾವ ಗುರುತಿಸಿ, ವಿಪಿಎಸ್ ಎಂಬ ಬಹುರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಅರುಣಕುಮಾರ್ ಅವರಿಗೆ ₹ 50 ಲಕ್ಷ ನೀಡಿದೆ. ಅಬುಧಾಬಿಯ ಬುರ್ಜಿಲ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹಣವನ್ನು ಅವರಿಗೆ ಹಸ್ತಾಂತರಿಸಲಾಯಿತು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
'ನನಗೆ ಏನೂ ನೆನಪಿಲ್ಲ. ಕುಟುಂಬ, ಸ್ನೇಹಿತರು ಹಾಗೂ ನೂರಾರು ಜನ ಹಿತೈಷಿಗಳ ಪ್ರಾರ್ಥನೆಯಿಂದಾಗಿ ನಾನು ಸಾವಿನ ದವಡೆಯಿಂದ ಪಾರಾಗಿದ್ದೇನೆ' ಎಂದು ಅರುಣಕುಮಾರ್ ಪ್ರತಿಕ್ರಿಯಿಸಿದ್ದಾರೆ.