ಚೆನ್ನೈ: ಕೇರಳದ ಕಾಂಗ್ರೆಸ್ ನಾಯಕ ಮತ್ತು ಪಟ್ಟಂಬಿ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಎಸ್.ಬಿ. ಥಂಗಳ್ ಅವರನ್ನು ಮಂಗಳವಾರ ಬೆಳಗ್ಗೆ ಕೊಯಮತ್ತೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗಳು ಬಂಧಿಸಿದ್ದು, ಅವರ ಲಗೇಜ್‌ನಿಂದ ರಿವಾಲ್ವರ್ ಮತ್ತು ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂದಿನ ತನಿಖೆಗಾಗಿ ಅವರನ್ನು ಪೀಲಮೇದು ಪೊಲೀಸರಿಗೆ ಒಪ್ಪಿಸಲಾಗಿದೆ.
ಕಾಂಗ್ರೆಸ್ ನಾಯಕ ಕೊಯಮತ್ತೂರಿನಿಂದ ಬೆಂಗಳೂರಿಗೆ ತೆರಳುವ ಇಂಡಿಗೊ ವಿಮಾನವನ್ನು ಹತ್ತಿ ಅಲ್ಲಿಂದ ಪಂಜಾಬ್‌ನ ಅಮೃತಸರಕ್ಕೆ ತೆರಳಬೇಕಿತ್ತು.
ತನ್ನ ಬ್ಯಾಗಿನಲ್ಲಿ ರಿವಾಲ್ವರ್ ಇದ್ದದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಥಂಗಲ್ ಅವರು ಸಿಐಎಸ್‌ಎಫ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುವ ವೇಳೆ ರಿವಾಲ್ವರ್ ಕೊಂಡೊಯ್ಯಲು ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ' ಎಂದು ಸಿಐಎಸ್‌ಎಫ್ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ ಮುಸ್ಲಿಂ ಎಜುಕೇಷನಲ್ ಸೊಸೈಟಿಯ (ಎಂಇಎಸ್) ಕಾರ್ಯದರ್ಶಿಯಾಗಿದ್ದು, ಮಕ್ಕಳಿಗೆ ಸಮವಸ್ತ್ರವನ್ನು ಖರೀದಿಸಲು ಅಮೃತಸರಕ್ಕೆ ಹೋಗುತ್ತಿದ್ದುದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ' ಎನ್ನಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿದ್ದ ವೇಳೆ 2007ರ ಫೆಬ್ರುವರಿಯಲ್ಲಿ ಅವರ ಬ್ಯಾಗಿನಲ್ಲಿ ಐದು ಜೀವಂತ ಗುಂಡುಗಳು ಪತ್ತೆಯಾಗಿತ್ತು. ಈ ವೇಳೆ ಸಿಐಎಎಫ್ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಶ್ನಿಸಿದ್ದರು.