ವಾಘಾ: ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ 73ನೇ ಗಣರಾಜ್ಯೋತ್ಸವದ ದಿನವಾದ ಬುಧವಾರ ಭಾರತ ಮತ್ತು ಪಾಕಿಸ್ಥಾನದ ಸೈನಿಕರು ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಯಮಯ ಮಾಡಿಕೊಂಡರು.
ಅಟ್ಟಾರಿ-ವಾಘಾ ಗಡಿ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೈನಿಕರು ಸಿಹಿ ಹಂಚಿ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಇದರಂತೆ ಬಾಂಗ್ಲಾ ಗಡಿಯಲ್ಲೂ ಸೈನಿಕರು ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.
ಗಡಿಯಲ್ಲಿ ಸೈನಿಕರ ನಡುವೆ ಶಾಂತಿ ನೆಲೆಸುವ ಸಲುವಾಗಿ ಸಿಹಿ ಹಂಚಿಕೆ ಮಾಡಿಕೊಳ್ಳುವ ಕ್ರಮ ಹಿಂದಿನಿಂದಲೂ ನಡೆದು ಬಂದಿತ್ತು.
ಈ ನಡುವೆ ಪ್ರಧಾನಿ ಮೋದಿ ಅವರು ಮೊದಲಿಗೆ ಬೆಳಗ್ಗೆ 10.05ಕ್ಕೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಪರಮ ತ್ಯಾಗ ಬಲಿದಾನ ಮಾಡಿದ ಯೋಧರಿಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಸೇನೆಯ ಮೂರು ವಿಭಾಗಗಳಾದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರು ಪ್ರಧಾನಮಂತ್ರಿಯವರೊಂದಿಗೆ ಉಪಸ್ಥಿತರಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸಿದ್ದು, ಪ್ರಧಾನಿ ಮೋದಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಧ್ವಜಾರೋಹಣ ಬಳಿಕ ರಾಷ್ಟ್ರಪತಿಗಳು ಗೌರವ ವಂದನಾ ವೇದಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಎಎಸ್‌ಐ ಬಾಬು ರಾಮ್ ಅವರಿಗೆ ಮರಣೋತ್ತರ ಅಶೋಕ ಚಕ್ರವನ್ನು ಪ್ರದಾನ ಮಾಡಿದರು.