HEALTH TIPS

ದೇಶ ವಿಭಜನೆಯಾದಾಗ ಪ್ರತ್ಯೇಕಗೊಂಡಿದ್ದ ಸೋದರರು 74 ವರ್ಷಗಳ ನಂತರ ಕರ್ತಾರ್ಪುರ್‌ನಲ್ಲಿ ಭೇಟಿ

Top Post Ad

Click to join Samarasasudhi Official Whatsapp Group

Qries

            ಅಮೃತಸರ್: ಪಾಕಿಸ್ತಾನದ ಕರ್ತಾರ್‌ಪುರ್ ಸಾಹಿಬ್ ನಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ಬುಧವಾರ ಅಪೂರ್ವ ಪುರ್ನಮಿಲನವೊಂದಕ್ಕೆ ಸಾಕ್ಷಿಯಾಗಿತ್ತು. 74 ವರ್ಷಗಳ ಹಿಂದೆ ದೇಶ ವಿಭಜನೆಯಾದಾಗ ಪ್ರತ್ಯೇಕಗೊಂಡಿದ್ದ ಇಬ್ಬರು ಸಹೋದರರು ಪರಸ್ಪರ ಭೇಟಿಯಾಗಿ ಗಾಢಾಲಿಂಗನ ಮಾಡಿದಾಗ ನೆರೆದಿದ್ದ ಜನರು ಕೂಡ ಭಾವಪರವಶರಾದರು ಎಂದು ವರದಿಯಾಗಿದೆ.


         ಇದೀಗ 80 ವರ್ಷ ದಾಟಿರುವ ಈ ಸೋದರರು 'ಮಿಲ್ ತಾ ಗಯೇ' (ಕೊನೆಗೂ ನಾವು ಭೇಟಿಯಾದೆವು) ಎಂದು ಜೋರಾಗಿ ಹೇಳಿದಾಗ ನೆರೆದವರೂ ಖುಷಿ ಪಟ್ಟರು. ಬುಧವಾರ ಬರೋಬ್ಬರಿ 74 ವರ್ಷಗಳ ನಂತರ ಭೇಟಿಯಾದವರು ಭಾರತದ ಮುಹಮ್ಮದ್ ಹಬೀಬ್ ಮತ್ತು ಪಾಕಿಸ್ತಾನದ ಫೈಸಲಾಬಾದಿನ ಮೊಹಮ್ಮದ್ ಸಿದ್ದೀಖಿ. ಸಾಮಾಜಿಕ ಜಾಲತಾಣದ ಸಹಾಯದೊಂದಿಗೆ ಹಬೀಬ್ ಅವರು ತಮ್ಮ ಸಹೋದರನನ್ನು ಪತ್ತೆಹಚ್ಚಿದರಲ್ಲದೆ ಕರ್ತಾರ್ಪುರ್ ಕಾರಿಡಾರ್ ಭಾರತದ ಯಾತ್ರಿಗಳಿಗೆ ತೆರೆದುಕೊಂಡಾಗ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಆ ಕ್ಷಣ ಬುಧವಾರ ಕೊನೆಗೂ ಬಂದೇ ಬಿಟ್ಟಿತು. ಈ ಸಂದರ್ಭ ಹಬೀಬ್ ತಮ್ಮ ಸೋದರನ ಜತೆ ಮಾತನಾಡುತ್ತಾ ತಾವು ಮದುವೆಯಾಗಿಲ್ಲ ಹಾಗೂ ಇಡೀ ಜೀವನವನ್ನು ತಾಯಿಯ ಸೇವೆಗೆ ಮುಡಿಪಾಗಿಟ್ಟಿದ್ದಾಗಿ ತಿಳಿಸಿದರು.

          ಇವರಿಬ್ಬರಂತೆಯೇ ಪಂಜಾಬ್‌ನ ಹೋಶಿಯಾರಪುರ್‌ನ ಅಜೋವಲ್ ಎಂಬಲ್ಲಿನ ಸುನೀತಾ ದೇವಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಅಲ್ಲಿಗೆ ಆಗಮಿಸಿ ಪಾಕಿಸ್ತಾನದಲ್ಲಿರುವ ತಮ್ಮ ಸಂಬಂಧಿಗಳನ್ನು ಭೇಟಿಯಾದರು. ವಿಭಜನೆಯ ಸಂದರ್ಭ ಸುನೀತಾ ಅವರ ತಂದೆ ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದ್ದರೆ ಅವರ ತಂದೆಯ ಸೋದರರು ಫೈಸಲಾಬಾದ್‌ಗೆ ವಲಸೆ ಹೋಗಿದ್ದರು.

ಇನ್ನೊಂದು ವಿದ್ಯಮಾನದಲ್ಲಿ ಅಮೃತಸರ್‌ನ ಜತೀಂದರ್ ಸಿಂಗ್ ಅವರು ಕರ್ತಾರ್ಪುರ್ ಕಾರಿಡಾರ್‌ಗೆ ಆಗಮಿಸಿ ತಮ್ಮ ಫೇಸ್ಬುಕ್ ಗೆಳತಿ, ಲಾಹೋರ್‌ನ ಪಂಜಾಬ್ ವಿವಿಯ ಸ್ನಾತ್ತಕೋತ್ತರ ವಿದ್ಯಾರ್ಥಿನಿಯನ್ನು ಭೇಟಿಯಾದರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries