ಅಹಮದಾಬಾದ್: ಗುಜರಾತ್‌ನ ಸೂರತ್ ನಗರ ಸತತ ಎರಡನೇ ಕೈ ದಾನ ಮಾಡುವ ಪ್ರಕ್ರಿಯೆಯನ್ನು ಶನಿವಾರ ಯಶಸ್ವಿಯಾಗಿ ಪೂರೈಸಿದ್ದು, ಬ್ರೈನ್ ಡೆಡ್ ಆಗಿದ್ದ 67 ವರ್ಷದ ವ್ಯಕ್ತಿಯ ಕೈಯನ್ನು ಕೇವಲ 75 ನಿಮಿಷಗಳಲ್ಲಿ 292 ಕಿ.ಮೀ ದೂರದ ಮಹಾರಾಷ್ಟ್ರಕ್ಕೆ ಸಾಗಿಸಿದೆ.
ಪಾರ್ಶ್ವವಾಯುಗೆ ಒಳಗಾಗಿದ್ದ ಸೂರತ್ ನ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಕುಟುಂಬ, ಆತನ ಪ್ರಮುಖ ಅಂಗಗಳನ್ನು ದಾನ ಮಾಡಲು ಸಮ್ಮತಿಸಿದ್ದು, ಆತನ ಕೈಯನ್ನು ಮಹಾರಾಷ್ಟ್ರದ 35 ವರ್ಷದ ಮಹಿಳೆಗೆ ದಾನ ಮಾಡಿದ್ದಾರೆ.
ಸೂರತ್ ನಗರದ ನಿವಾಸಿ 67 ವರ್ಷದ ಕನು ವಶ್ರಂಭಾಯಿ ಪಟೇಲ್ ಅವರು ಜನವರಿ 18 ರಂದು ಪಾರ್ಶ್ವವಾಯುಗೆ ತುತ್ತಾಗಿದ್ದರು. ಪಟೇಲ್ ಅವರನ್ನು ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.ಮೆದುಳಿನಲ್ಲಿ ತೀವ್ರವಾದ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಆದಾಗ್ಯೂ, ಜನವರಿ 20 ರಂದು ಆಸ್ಪತ್ರೆಯ ವೈದ್ಯರು ಪಟೇಲ್ ಅವರ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದರು. ನಂತರ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಡೊನೇಟ್ ಲೈಫ್ ತಂಡ ವ್ಯಕ್ತಿಯ ಅಂಗಾಂಗ ದಾನಕ್ಕಾಗಿ ರೋಗಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿದರು ಮತ್ತು ಪ್ರಮುಖ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿದರು. ಎರಡೂ ಕೈಗಳ ಜೊತೆಗೆ ಕಿಡ್ನಿ, ಲಿವರ್, ಕೊರ್ನಿಯಾಗಳನ್ನು ಕೂಡ ಕುಟುಂಬಸ್ಥರು ದಾನ ಮಾಡಿದ್ದಾರೆ.
ಆರರಿಂದ ಎಂಟು ಗಂಟೆಗಳಲ್ಲಿ ಕೈ ಕಸಿ ಮಾಡಬೇಕಾಗಿರುವುದರಿಂದ(ಇಲ್ಲದಿದ್ದರೆ ಅಂಗವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ) ಗ್ರೀನ್ ಕಾರಿಡಾರ್ ಮೂಲಕ ವ್ಯಕ್ತಿಯ ಕೈಗಳನ್ನು ಸೂರತ್ ಆಸ್ಪತ್ರೆಯಿಂದ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ವಿಮಾನದ ಮೂಲಕ ಕೇವಲ 75 ನಿಮಿಷಗಳಲ್ಲಿ 292 ಕಿಲೋಮೀಟರ್ ಸಾಗಿಸಲಾಯಿತು.
ಮಹಾರಾಷ್ಟ್ರದ ಬುಲ್ಧಾನಾ ಮೂಲದ 35 ವರ್ಷದ ಮಹಿಳೆಗೆ ಕೈಗಳನ್ನು ಕಸಿ ಮಾಡಲಾಗಿದೆ. ಈ ಮಹಿಳೆ ಮೂರು ವರ್ಷಗಳ ಹಿಂದೆ ಬಟ್ಟೆ ನೇತು ಹಾಕುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು.
ಡೊನೇಟ್ ಲೈಫ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ನೀಲೇಶ್ ಮಂಡ್ಲೇವಾಲ ಮಾತನಾಡಿ, ಬ್ರೇನ್ ಡೆಡ್ ರೋಗಿಯ ಕುಟುಂಬದ ಸದಸ್ಯರು ಇತರರ ಜೀವ ಉಳಿಸಲು ಅವರ ಪ್ರಮುಖ ಅಂಗಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ನಾವು ಅವರನ್ನು ಪ್ರಶಂಸಿಸುತ್ತೇವೆ. ಇದು ಸೂರತ್‌ನಿಂದ ಸತತ ಎರಡನೇ ಕೈ ದಾನವಾಗಿದೆ. ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 20 ಕೈ ಕಸಿ ಮಾಡಲಾಗಿದೆ ಎಂದರು.