ಕೋಲ್ಕತ್ತ: ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಬಿಕನೇರ್-ಗುವಾಹಟಿ ನಡುವಣ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಗುರುವಾರ (ಜ.13) ಸಂಜೆ ಸುಮಾರು 5 ಗಂಟೆ ಹೊತ್ತಿನಲ್ಲಿ ನಡೆದ ಅವಘಡದಲ್ಲಿ 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
12ಕ್ಕೂ ಬೋಗಿಗಳು ಉರುಳಿದವು. ಈ ರೈಲಿನಲ್ಲಿ 1,053 ಮಂದಿ ಪ್ರಯಾಣಿಸುತ್ತಿದ್ದರು ಎಂದು ಈಶಾನ್ಯ ಫ್ರಂಟಿಯರ್ ರೈಲ್ವೆ (ಎನ್‌ಎಫ್‌ಆರ್) ವಕ್ತಾರ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆಸ್ಪತ್ರೆಯಲ್ಲಿ ಮೂವರು ಸಾವಿಗೀಡಾದರು. ಗಾಯಾಳುಗಳ ಪೈಕಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರುವ ಭೀತಿ ಕಾಡುತ್ತಿದೆ.
ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಕತ್ತಲೆ ಹಾಗೂ ದಟ್ಟವಾದ ಮಂಜು ಆವರಿಸಿರುವುದು ರಕ್ಷಣಾ ಕಾರ್ಯಚರಣೆಗೆ ತೊಡಕಾಗಿ ಪರಿಣಮಿಸಿತು. ಬೋಗಿಗಳನ್ನು ಕ್ರೇನ್ ಮೂಲಕ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ₹5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ₹25 ಸಾವಿರ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
}