ನವದೆಹಲಿ: ಭಾರತಕ್ಕೆ ಬರುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಕಳೆದ ಕೆಲವು ದಿನಗಳಿಂದ ದೇಶದ ಅನೇಕ ನಗರಗಳಲ್ಲಿ ಕೋವಿಡ್ -19 ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ.
ಅಪಾಯದಲ್ಲಿರುವ ನಿರ್ದಿಷ್ಟ ದೇಶಗಳ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ ನಂತರ ಕೋವಿಡ್ ಪರೀಕ್ಷೆಗಾಗಿ ತಮ್ಮ ಮಾದರಿಗಳನ್ನು ನೀಡಬೇಕು ಮತ್ತು ಹೊಸ ನಿಯಮಗಳ ಪ್ರಕಾರ ಅವರ ಪರೀಕ್ಷಾ ಫಲಿತಾಂಶ ಬಂದ ನಂತರವೇ ಅವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುತ್ತದೆ.
ಏತನ್ಮಧ್ಯೆ, ಕೊರೋನಾ ವೈರಸ್ ಮತ್ತು ಓಮಿಕ್ರಾನ್ ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರ ಸಹ ವಿದೇಶದಿಂದ ಬರುವ ಎಲ್ಲರಿಗೂ ಒಂದು ವಾರ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಕೇರಳದಲ್ಲಿ ಇದುವರೆಗೆ 280 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ ಮತ್ತು ಕಡಿಮೆ ಅಪಾಯದ ದೇಶಗಳಿಂದ ಬಂದವರಿಂದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಹೇಳಿದ್ದಾರೆ.