ಚೆನ್ನೈ: ಎನ್.ಸಿ ವಿಶಾಲಿನಿ ತಮಿಳುನಾಡಿನ ವಿರುದುನಗರ ನಿವಾಸಿ. ಕೇವಲ 7 ವರ್ಷದ ವಿಶಾಲಿನಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಆಕೆ ಭಾಜನಳಾಗಿರುವುದು ವಿಶೇಷ.
ಬಾಲಕಿ ವಿಶಾಲಿನಿ ಪ್ರವಾಹದಿಂದ ರಕ್ಷಣೆ ಒದಗಿಸುವ ಮನೆಯ ಮಾದರಿಯನ್ನು ತಯಾರಿಸಿದ್ದಾಳೆ. ಈ ಪ್ರಾಜೆಕ್ಟ್ ಪ್ರಧಾನಮಂತ್ರಿ ಸಚಿವಾಲಯದ ಗಮನಕ್ಕೆ ಬಂದಿದ್ದು ಅದಕ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿ ತಲೆದೋರುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ. ಅದನ್ನು ಗಮನಿಸಿದ ಬಾಲಕಿ ತನ್ನ ಪುಟ್ಟ ತಲೆಯಲ್ಲಿ ಹೊಳೆದ ಉಪಾಯವನ್ನೇ ಉಪಯೋಗಿಸಿ ಸಮಾಜಕ್ಕೆ ಉಪಯುಕ್ತವಾದ ಪ್ರಾಜೆಕ್ಟ್ ಮಾಡಿರುವುದು ಹೆಮ್ಮೆ ಪಡುವ ವಿಚಾರವೇ ಸರಿ.
ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಯನ್ನು 18 ವರ್ಷದ ಕೆಳಗಿನ ಮಕ್ಕಳಿಗೆ ಪ್ರತಿವರ್ಷ ನೀಡಲಾಗುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಶೋಧನಾ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮೆರೆದ ಮಕ್ಕಳು ಈ ಪ್ರಶಸ್ತಿಗೆ ಅರ್ಹರು. ಈ ಪುರಸ್ಕಾರ ಪ್ರಧಾನಿಯವರ ಸಹಿಯುಳ್ಳ ಪ್ರಮಾನಪತ್ರವಲ್ಲದೆ 1 ಲಕ್ಷ ರೂ. ನಗದನ್ನು ಒಳಗೊಂಡಿದೆ.