ಅಧ್ಯಯನ ವರದಿಯು 'ಸೈನ್ಸ್' ಎಂಬ ನಿಯತಕಾಲಿಕದಲ್ಲಿ ಗುರುವಾರ ಪ್ರಕಟವಾಗಿದೆ. 2020ರ ಮಾರ್ಚ್‌ನಿಂದ 2021ರ ಜುಲೈವರೆಗೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 1,37,289 ವಯಸ್ಕರನ್ನು ಸಂದರ್ಶಿಸಿ, ಮಾಹಿತಿ ಸಂಗ್ರಹಿಸಲಾಗಿದೆ.
ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಭಾತ್ ಝಾ ನೇತೃತ್ವದ ಅಂತರರಾಷ್ಟ್ರೀಯ ತಂಡ ಕೂಡ ಕೋವಿಡ್‌ನಿಂದಾದ ಸಾವುಗಳ ಕುರಿತು ಅಧ್ಯಯನ ನಡೆಸಿದೆ.
2020ರ ಜೂನ್‌ನಿಂದ 2021ರ ಜುಲೈ ವರೆಗಿನ ಅವಧಿಯಲ್ಲಿ ದೇಶದಲ್ಲಿ 32 ಲಕ್ಷ ಜನರು ಮೃತಪಟ್ಟಿದ್ದಾರೆ. ಈ ಪೈಕಿ ಕೋವಿಡ್‌ನಿಂದ ಮೃತಪಟ್ಟವರ ಪ್ರಮಾಣ ಶೇ 29ರಷ್ಟು ಎಂದು ಝಾ ನೇತೃತ್ವದಲ್ಲಿ ನಡೆದ ಅಧ್ಯಯನ ಹೇಳುತ್ತದೆ.
ಇನ್ನೊಂದೆಡೆ, ಸರ್ಕಾರದ ಅಂಕಿ-ಅಂಶಗಳನ್ನು ಆಧರಿಸಿ ಎರಡು ಅಧ್ಯಯನಗಳು ನಡೆದಿವೆ. ಕೋವಿಡ್ ಪಿಡುಗಿನ ಮುಂಚಿನ ಅವಧಿಗೆ ಹೋಲಿಸಿದರೆ 10 ರಾಜ್ಯಗಳ 2 ಲಕ್ಷ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ ಶೇ 27ಕ್ಕಿಂತ ಅಧಿಕವಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಆದ ನೋಂದಣಿ ಪ್ರಕಾರ, ಈ ಪ್ರಮಾಣ ಶೇ 26ರಷ್ಟು ಅಧಿಕವಿದ್ದುದು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಮರಣ ಪ್ರಮಾಣ 2021ರಲ್ಲಿಯೇ ಅಧಿಕವಾಗಿದ್ದುದು ಕಂಡುಬಂದಿದೆ ಎಂದೂ ಅವರು ಹೇಳಿದ್ದಾರೆ.
'ಕೋವಿಡ್‌ನಿಂದಾಗಿ ಮೃತಪಟ್ಟವರ ಕುರಿತು ದೇಶದಲ್ಲಿ ಸಮರ್ಪಕ ವರದಿಯಾಗಿಲ್ಲ. ಕೋವಿಡ್‌ನಿಂದಾದ ಸಾವುಗಳ ದಾಖಲೀಕರಣ ಅಪೂರ್ಣವಾಗಿರುವುದು ಹಾಗೂ ಕೆಲವರ ಸಾವಿಗೆ ಕೋವಿಡ್ ಬದಲು ದೀರ್ಘಕಾಲೀನ ಕಾಯಿಲೆಗಳು ಕಾರಣ ಎಂಬುದಾಗಿ ಹೇಳಿದ್ದರಿಂದಾಗಿ ಸಮರ್ಪಕ ವರದಿಯಾಗಿಲ್ಲ' ಎಂದೂ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇತರ ಅಂಶಗಳು
* 2021ರ ಜೂನ್‌ವರೆಗೆ ಮೃತಪಟ್ಟವರ ಸಂಖ್ಯೆ 40 ಲಕ್ಷಕ್ಕೂ ಅಧಿಕ ಎಂಬುದು ಸಂಶೋಧಕರ ಹೇಳಿಕೆ
* ಕೋವಿಡ್‌ನಿಂದಾಗುವ ಸಾವುಗಳ ದಾಖಲೀಕರಣಕ್ಕೆ ಪರ್ಯಾಯ ಕ್ರಮಗಳ ಅಗತ್ಯವಿದೆ
'ಓಮೈಕ್ರಾನ್ ತೀವ್ರತೆ ಕಡಿಮೆ: ತಪ್ಪು ಗ್ರಹಿಕೆ'
ಜಿನೀವಾ: 'ಕೊರೊನಾ ವೈರಸ್‌ನ ಓಮೈಕ್ರಾನ್ ತಳಿಯ ತೀವ್ರತೆ ಕಡಿಮೆ ಎಂದುಕೊಳ್ಳುವುದು ತಪ್ಪು ಗ್ರಹಿಕೆ. ಜಾಗತಿಕವಾಗಿ ಈ ತಳಿಯ ಸೋಂಕು ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರೆಯೇಸಸ್ ಹೇಳಿದ್ದಾರೆ.
'ಓಮೈಕ್ರಾನ್ ತಳಿಯ ಸೋಂಕು ಎಷ್ಟು ವೇಗವಾಗಿ ಪ್ರಸರಣವಾಗುತ್ತಿದೆ ಎಂದರೆ, ಈ ಹಿಂದಿನ ಡೆಲ್ಟಾ ತಳಿಗಿಂತ ಹೆಚ್ಚು ಜನರನ್ನು ಬಾಧಿಸಲಿದೆ. ಅಂದರೆ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂತ ಭರ್ತಿಯಾಗಿ, ತೀವ್ರ ಒತ್ತಡ ಅನುಭವಿಸಲಿವೆ' ಎಂದು ಅವರು ಎಚ್ಚರಿಸಿದ್ದಾರೆ.