ಚೆನ್ನೈ: ಸಮಯಪಾಲನೆ ಕಾರ್ಯಕ್ಷಮತೆ ವಿಷಯದಲ್ಲಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ವರ್ಷದಲ್ಲಿ 8 ನೇ ಶ್ರೇಣಿ ಲಭಿಸಿದೆ.
ಪ್ರಯಾಣ, ಹಣಕಾಸು, ಏರೋಸ್ಪೇಸ್ ಹಾಗೂ ಏವಿಯೇಷನ್ ಉದ್ಯಮಗಳಿಗೆ ಏವಿಯೇಷನ್ ಡೇಟಾ ಒದಗಿಸುವ ಸಿರಿಯಮ್ ಈ ಶ್ರೇಣಿಯನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಟಾಪ್ 10 ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಏಕೈಕ ಭಾರತೀಯ ವಿಮಾನ ನಿಲ್ದಾಣವೂ ಇದಾಗಿದ್ದು, ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣ, ಜಪಾನ್ ನ ಫುಕುವೋಕಾ ಹಾಗೂ ಹನೆಡಾ ವಿಮಾನ ನಿಲ್ದಾಣಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.
ಜಾಗತಿಕವಾಗಿ 70 ಮಾರ್ಗಗಳಿಗೆ ಸಮಯಕ್ಕೆ ಸರಿಯಾಗಿ ಹೊರಡುವುದನ್ನು ವಿಶ್ಲೇಷಿಸಿರುವ ಸಿರಿಯಮ್, ಚೆನ್ನೈ ಗೆ ಶೇ.89.32 ಶ್ರೇಯಾಂಕ ನೀಡಿದೆ. ಚೆನ್ನೈ ನ ವಿಮಾನ ನಿಲ್ದಾಣದ ನಿರ್ದೇಶಕ ಡಾ. ಶರದ್ ಕುಮಾರ್ ಎಲ್ಲಾ ಕೀರ್ತಿಯೂ ಕಾರ್ಯನಿರ್ವಹಣೆ ಮಾಡುತ್ತಿರುವ ಏರ್ಲೈನ್ಸ್ ಗೆ ಸಲ್ಲಬೇಕೆಂದು ಹೇಳಿದ್ದಾರೆ. ಪಾಲುದಾರರ ಬಾಂಧವ್ಯ, ವಿಮಾನ ನಿಲ್ದಾಣದಲ್ಲಿ ಸಹಭಾಗಿತ್ವದ ನಿರ್ಧಾರ ತೆಗೆದುಕೊಳ್ಳುವುದು ನಮಗೆ ಪ್ರಯಾಣಿಕರು ಹಾಗೂ ಉದ್ಯಮದ ವಿಶ್ವಾಸ ಗಳಿಸುವುದಕ್ಕೆ ಸಹಕಾರಿಯಾಗಿದೆ ಎಂದು ಡಾ.ಕುಮಾರ್ ಹೇಳಿದ್ದಾರೆ.