ನವದೆಹಲಿ: ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ಅಬ್ಬರ ಜೋರಾಗಿರುವಂತೆಯೇ ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಸುಮಾರು 800ಕ್ಕೂ ಹೆಚ್ಚು ವೈದ್ಯರು ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿ ಕರ್ತವ್ಯದಿಂದ ದೂರವಾಗುತ್ತಿರುವುದರಿಂದ ದೆಹಲಿ ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗುತ್ತಿದೆ. ದೆಹಲಿಯ 5 ಪ್ರಮುಖ ಆಸ್ಪತ್ರೆಗಳ 800 ಕ್ಕೂ ಹೆಚ್ಚು ವೈದ್ಯರು ಕೋವಿಡ್ ಸೋಂಕಿಗೊಳಗಾಗಿದ್ದಾರೆ. ವೈದ್ಯರೊಂದಿಗೆ ಸಂಪರ್ಕಕ್ಕೆ ಬಂದ ಇತರೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಕೂಡ ಐಸೋಲೇಟ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಸೋಂಕಿತರಾಗುತ್ತಿರುವುದರಿಂದ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿ ನಿತ್ಯ ತಪಾಸಣೆ, ಒಪಿಡಿ ಹಾಗೂ ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಲಾಗುತ್ತಿದೆ.
ಏಮ್ಸ್ ನಲ್ಲಿ ಪರಿಸ್ಥಿತಿ
ದೆಹಲಿ ಆಸ್ಪತ್ರೆಗಳ ಪೈಕಿ ಏಮ್ಸ್ ಕೆಟ್ಟ ಸ್ಥಿತಿ ಎದುರಿಸುತ್ತಿದ್ದು, ಏಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 350 ವೈದ್ಯರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಖ್ಯೆ ಕೇವಲ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ವೈದ್ಯರದ್ದಾಗಿದೆ. ಆಸ್ಪತ್ರೆಯ ಅಧ್ಯಾಪಕರು, ಅರೆವೈದ್ಯಕೀಯ ಸಿಬ್ಬಂದಿಯನ್ನು ಸೇರಿಸಿದರೆ ಈ ಸಂಖ್ಯೆ ತುಂಬಾ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ನಂತರದ ಸ್ಥಾನದಲ್ಲಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ ಇದ್ದು, ಇಲ್ಲಿ ಸುಮಾರು 80-100 ವೈದ್ಯರು, ಬಳಿಕ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ 100 ಕ್ಕೂ ಹೆಚ್ಚು ವೈದ್ಯರು, ಲೋಕನಾಯಕ ಆಸ್ಪತ್ರೆಯ 50-70 ವೈದ್ಯರು ಮತ್ತು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ 150 ವೈದ್ಯರು ಕೋವಿಡ್ ಗೆ ತುತ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.