ನವದೆಹಲಿ: ಭ್ರಷ್ಟಾಚಾರದ ಗ್ರಹಿಕೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 85ನೇ ಸ್ಥಾನ ಗಳಿಸಿದೆ. 180 ದೇಶಗಳಲ್ಲಿ ಈ ಕುರಿತಾಗಿ ಸಮೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷ ಭಾರತ 86ನೇ ಸ್ಥಾನದಲ್ಲಿತ್ತು. ಈ ಬಾರಿ ಭಾರತ ಒಂದು ಸ್ಥಾನ ಮೇಲಕ್ಕೇರಿದೆ. ಡೆನ್ಮಾರ್ಕ್, ಫಿನ್ಲೆಂಡ್ ಮತ್ತು ನ್ಯೂಜಿಲೆಂಡ್ ದೇಶಗಳು ಮೊದಲ ಸ್ಥಾನ ಹಂಚಿಕೊಂಡಿವೆ.
ಈ ಸಮೀಕ್ಷೆಯ ವೈಶಿಷ್ಟ್ಯವೆಂದರೆ 180 ದೇಶಗಳ ಜನಸಾಮಾನ್ಯರು, ವ್ಯಾಪಾರಿಗಳು, ಸಾರ್ವಜನಿಕ ವಲಯದ ಜನರಲ್ಲಿ ತಮ್ಮ ದೇಶದ ಭ್ರಷ್ಟಾಚಾರದ ಕುರಿತ ಅಭಿಪ್ರಾಯಗಳನ್ನು ಆಧರಿಸಿದೆ ಎನ್ನುವುದು.
ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರು ಭ್ರಷ್ಟಾಚಾರ ವಿಷಯದಲ್ಲಿ ತಮ್ಮ ದೇಶಕ್ಕೆ 0ರಿಂದ 100ರ ನಡುವೆ ಅಂಕಗಳನ್ನು ನೀಡುವ ಮೂಲಕ ತಮ್ಮ ಅಭಿಪ್ರಾಯ ಪ್ರಸ್ತುತ ಪಡಿಸಿದ್ದಾರೆ. 0 ಎಂದರೆ ಅತಿ ಭ್ರಷ್ಟ ಎಂದು. 100 ಎಂದರೆ ಭ್ರಷ್ಟಾಚಾರ ಇಲ್ಲ ಎಂದು. ಮೊದಲ ಸ್ಥಾನ ಹಂಚಿಕೊಂಡ ಡೆನ್ಮಾರ್ಕ್, ಫಿನ್ಲೆಂಡ್ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳು 88 ಅಂಕ ಗಳಿಸಿವೆ. ಭಾರತ 40 ಅಂಕ ಗಳಿಸಿದರೆ, ಪಾಕಿಸ್ತಾನ 26 ಅಂಕ ಗಳಿಸಿ 140ನೇ ಸ್ಥಾನ ಪಡೆದಿದೆ.