ಫಿರೋಜಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರ ರಾಜಿನಾಮೆ ಪರ್ವ ಮುಂದುವರೆದಿದೆ. ಇಂದು ಶಿಕೋರಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಮುಕೇಶ್ ವರ್ಮಾ ಮತ್ತು ಸಚಿವ ಧರಂ ಸಿಂಗ್ ಸೈನಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಹಿಂದುಳಿದ ವರ್ಗಗಳು ಮತ್ತು ದಲಿತರ ಬಗ್ಗೆ ಸರ್ಕಾರದಿಂದ ಗೌರವದ ಕೊರತೆಯಿದೆ ಎಂದು ಆರೋಪಿಸಿ ಮುಕೇಶ್ ವರ್ಮಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇಬ್ಬರು ಸಚಿವರು ಹಾಗೂ ಐವರು ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಹಿಂದುಳಿದ ವರ್ಗಗಳು, ದಲಿತರು, ನಿರುದ್ಯೋಗಿ ಯುವಕರು, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ವ್ಯಾಪಾರಿಗಳು ಮತ್ತು ಅಂಗಡಿಕಾರರನ್ನು ಕಡೆಗಣಿಸಲಾಗಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವರ್ಮಾ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಹಿಂದುಳಿದ ವರ್ಗಗಳ(ಒಬಿಸಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ನೇತೃತ್ವದಲ್ಲಿ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು. ಇನ್ನು ಮುಕೇಶ್ ವರ್ಮಾ ಸಮಾಜವಾದಿ ಪಕ್ಷ (ಎಸ್‌ಪಿ) ಸೇರುತ್ತಾರೆ ಎಂಬ ಊಹಾಪೋಹಗಳಿವೆ.
ಮುಕೇಶ್ ವರ್ಮಾ ರಾಜಿನಾಮೆ ಬೆನ್ನಲ್ಲೇ ಇದೀಗ ಸೈನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಿನಾಮೆ ಬಳಿಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಸೈನಿ ಭೇಟಿಯಾಗಿದ್ದರು. ಸೈನಿಯನ್ನು ಸಮಾಜವಾದಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ಯಾದವ್ ಅವರು ಭೇಟಿಯಾದ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.