ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್, ಓಮಿಕ್ರಾನ್ ದಿನೇದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಇಡೀ ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಹೇರಿಕೆಯಾಗಿದ್ದು ಇಂದು ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಅನ್ವಯವಾಗಿರುತ್ತದೆ.
ಜನರು ಏನೇ ಕೆಲಸವಿದ್ದರೂ, ಎಲ್ಲಿಗೂ ಹೋಗುವುದಿದ್ದರೂ ರಾತ್ರಿ 8 ಗಂಟೆಯೊಳಗೆ ಎಲ್ಲಾ ಮುಗಿಸಿ ಮನೆಗೆ ಸೇರಬೇಕು. ಇವತ್ತು ರಾತ್ರಿ 8 ಗಂಟೆಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿಗೆ ಬರುತ್ತದೆ. ಇದು ಜನವರಿ 19ರ ಮುಂಜಾನೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಇಂದಿನಿಂದ ಎರಡು ದಿನ ಏನಿರುತ್ತೆ, ಏನಿರಲ್ಲ: ವೀಕೆಂಡ್ ಕರ್ಫ್ಯೂ ವೇಳೆ, ಆಹಾರ ವಸ್ತು, ಹೊಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ. ಬಿಎಂಟಿಸಿ ಬಸ್ಸುಗಳು ಇಂದು ರಾತ್ರಿಯಿಂದ ಸೋಮವಾರ ಬೆಳಗ್ಗೆ ತನಕ ಸಂಚಾರವಿರುವುದಿಲ್ಲ.
ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ (ಜನವರಿ 7,8 & 14, 15) ಸಾಮಾನ್ಯ ಜನರಿಗೆ ಬಿಎಂಟಿಸಿ ಬಸ್ ಸೌಲಭ್ಯ ಲಭ್ಯವಿರುವುದಿಲ್ಲ. ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಬಸ್‌ಗಳು ಸಂಚಾರ ನಡೆಸಲಿವೆ. ಅಗತ್ಯ ಸೇವೆಗಳನ್ನು ನೀಡುವ ಸಿಬ್ಭಂದಿ ಕಚೇರಿಗೆ ತೆರಳಲು ಮಾತ್ರ ಬಸ್ ಓಡಿಸಲಾಗುತ್ತದೆ.
ಅಗತ್ಯ ಸೇವೆಗಳನ್ನು ಒದಗಿಸುವ ಸಿಬ್ಬಂದಿ ಕಚೇರಿಗೆ ಹೋಗಲು ಶೇ 10ರಷ್ಟು ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತದೆ. ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಬಸ್ ಸಂಚಾರ ಇರುವುದಿಲ್ಲ. ಅಗತ್ಯ ಸೇವೆಗಳಿಗಾಗಿ ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ತನಕ ಮಾತ್ರ ಬಸ್ ಸಂಚಾರ ಇರುತ್ತದೆ.
ಇಂದು ರಾತ್ರಿಯಿಂದ ಎರಡು ದಿನ ಯಾರು ಹೊರ ಓಡಾಡಬಹುದು?: ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು. ಬೋರ್ಡ್/ ಕಾರ್ಪೊರೇಷನ್ ಸಿಬ್ಬಂದಿಗಳು, ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ & ತುರ್ತು ಸೇವೆಗಳ ಸಿಬ್ಬಂದಿ ಬಸ್‌ನಲ್ಲಿ ಸಂಚಾರ ನಡೆಸಬಹುದಾಗಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ, ಲ್ಯಾಬ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇತರ ಸಿಬ್ಬಂದಿಗಳು.
ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಅವರನ್ನು ಚಿಕಿತ್ಸೆ, ಪರೀಕ್ಷೆಗೆ ಕರೆದುಕೊಂಡು ಹೋಗವವರು ಸಂಚಾರ ನಡೆಸಬಹುದು.
ಸರ್ಕಾರಿ/ ಖಾಸಗಿ ಬ್ಯಾಂಕ್, ವಿಮೆ ಕಂಪನಿಗಳ ಸಿಬ್ಭಂದಿಗಳು, ಅಧಿಕಾರಿಗಳು. ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವವರು ಸಂಚರಿಸಬಹುದು.
ದೂರದ ಊರುಗಳಿಗೆ ಪ್ರಯಾಣ ಮಾಡುವ ಬಸ್, ವಿಮಾನ, ರೈಲು ಪ್ರಯಾಣಿಕರು. (ಟಿಕೆಟ್ ತೋರಿಸಿ ಪ್ರಯಾಣ ಮಾಡಬೇಕು).
ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
ಬಸ್‌ನಲ್ಲಿ ಪ್ರಯಾಣಿಸುವ ಎಲ್ಲರೂ ಕಡ್ಡಾಯವಾಗಿ ಐಡಿ ಕಾರ್ಡ್ ತೋರಿಸಬೇಕು. ಸಾಮಾನ್ಯ ಜನರಿಗೆ ಬಸ್‌ನಲ್ಲಿ ಸಂಚಾರ ನಡೆಸಲು ಅವಕಾಶವಿಲ್ಲ.
ಕೋವಿಡ್ ನಿಯಮ ಪಾಲನೆ ಕಡ್ಡಾಯ: ಬಸ್ಸಿನ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಿಬ್ಬಂದಿಗಳು ಸ್ಯಾನಿಟೈಸರ್ ಬಳಕೆ ಮಾಡಬೇಕು, ಬಸ್ಸಿನಲ್ಲಿ ಸೀಟು ಇದ್ದರೆ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು, ನಿಗದಿಪಡಿಸಿದ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‌ಗಳನ್ನು ನಿಲ್ಲಿಸಬೇಕು, ಎಲ್ಲಾ ಪ್ರಯಾಣಿಕರ ಗುರುತಿನ ಚೀಟಿ ಪರಿಶೀಲನೆ ನಡೆಸಿಯೇ ಬಸ್‌ಗೆ ಹತ್ತಿಸಿಕೊಳ್ಳಬೇಕು.
ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಇರಲಿದೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 9ರ ತನಕ ಮಾತ್ರ ಮೆಟ್ರೋ ರೈಲು ಸಂಚರಿಸಲಿದೆ. ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಮೆಟ್ರೋ ರೈಲು ಹೊರಡಲಿದೆ. ಪ್ರತಿ 20 ನಿಮಿಷಕ್ಕೆ ಒಂದು ರೈಲು ಹೊರಡಲಿದೆ. ಟರ್ಮಿನಲ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 9 ಗಂಟೆಗೆ ಹೊರಡಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ತಿಳಿಸಿದೆ.