ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು(ಸೋಮವಾರ) ಪರಿಶೀಲನಾ ಸಭೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಬಂಧಗಳನ್ನು ತರುವ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಓಮಿಕ್ರಾನ್ ವಿಸ್ತರಣೆಯ ಹಿನ್ನೆಲೆಯಲ್ಲಿ ಮೊನ್ನೆ ಶನಿವಾರ ರಾಜ್ಯದಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ. ಅದರಂತೆ ಮುಚ್ಚಿದ ಸಭಾಂಗಣಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಗಮಿಸುವವರ ಸಂಖ್ಯೆ 75ಕ್ಕೆ ಇಳಿಕೆಯಾಗಿದೆ. ಹೊರಾಂಗಣ ಕಾರ್ಯಕ್ರಮಗಳಲ್ಲಿ 150 ಜನರು ಭಾಗವಹಿಸಬಹುದು. ಮೊದಲು 150 ಮಂದಿಗೆ ಹಾಗೂ 200 ಮಂದಿಗೆ ಅನುಮತಿ ನೀಡಲಾಗಿತ್ತು.
ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ದೇಶಗಳಿಂದ ಆಗಮಿಸುವ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ತಪಾಸಣೆಯನ್ನು ಬಲಪಡಿಸಬೇಕು ಎಂದು ಸೂಚಿಸಲಾಗಿದೆ. ಏತನ್ಮಧ್ಯೆ, ನಿನ್ನೆ ರಾಜ್ಯದಲ್ಲಿ 6,238 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 30 ಮಂದಿ ಮೃತರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 49,591 ಕ್ಕೆ ತಲುಪಿದೆ.