ತಿರುವನಂತಪುರ: ರಾಜ್ಯದಲ್ಲಿ 15 ರಿಂದ 18 ವರ್ಷದೊಳಗಿನ 1,02,265 ಹದಿಹರೆಯದವರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತ್ರಿಶೂರ್ ಜಿಲ್ಲೆ 20,307 ಡೋಸ್ ಲಸಿಕೆಗಳೊಂದಿಗೆ ಮುಂಚೂಣಿಯಲ್ಲಿದೆ. 10,601 ಮಂದಿ ಲಸಿಕೆ ಹಾಕಿಸಿಕೊಂಡಿರುವ ಅಲಪ್ಪುಳ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು, 9533 ಮಂದಿ ಲಸಿಕೆ ಹಾಕಿಸಿಕೊಂಡಿರುವ ಕಣ್ಣೂರು ಜಿಲ್ಲೆ ಮೂರನೇ ಸ್ಥಾನದಲ್ಲಿದೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು 3,18,329 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇಲ್ಲಿಯವರೆಗೆ ಶೇ.21 ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದವರು ಮಾಹಿತಿ ನೀಡಿರುವರು. ತಿರುವನಂತಪುರ 6899, ಕೊಲ್ಲಂ 8508, ಪತ್ತನಂತಿಟ್ಟ 5075, ಕೊಟ್ಟಾಯಂ 7796, ಇಡುಕ್ಕಿ 3650, ಎರ್ನಾಕುಳಂ 3959, ಪಾಲಕ್ಕಾಡ್ 8744, ಮಲಪ್ಪುರಂ 6763, ಕೋಝಿಕ್ಕೋಡ್ 5364, ವಯನಾಡ್ 2161 ಮತ್ತು ಕಾಸರಗೋಡು 2905 ಎಂಬಂತೆ ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಮಕ್ಕಳಿಗಾಗಿ 963 ಲಸಿಕಾ ಕೇಂದ್ರಗಳು ಮತ್ತು 18 ವರ್ಷ ಮೇಲ್ಪಟ್ಟವರಿಗೆ 679 ಲಸಿಕಾ ಕೇಂದ್ರಗಳು ಸೇರಿದಂತೆ ಒಟ್ಟು 1642 ಲಸಿಕಾ ಕೇಂದ್ರಗಳಿವೆ. ಜನವರಿ 10ರವರೆಗೆ ನಡೆಯಲಿರುವ ಲಸಿಕಾ ಅಭಿಯಾನದ ಅಂಗವಾಗಿ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಜಿಲ್ಲಾ, ಸಾಮಾನ್ಯ ಮತ್ತು ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಮಂಗಳವಾರ, ಶುಕ್ರವಾರದಂದು ಮಕ್ಕಳಿಗೆ ವಿಶೇಷ ಲಸಿಕಾ ಕೇಂದ್ರಗಳಿವೆ.ಶನಿವಾರ ಮತ್ತು ಭಾನುವಾರ ಪ್ರಾಥಮಿಕ ಮತ್ತು ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿರಲಿದೆ.