ನವದೆಹಲಿ: ಕೋವಿಡ್-19 ಅಲೆಯ ತಡೆಗೆ ಆರೋಗ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮಹಾರಾಷ್ಟ್ರ ಅತಿ ಹಿಂದುಳಿದಿದೆ ಎಂದು ಸರ್ಕಾರದ ಅಂಕಿಅಂಶ ಹೇಳುತ್ತದೆ.
ರಾಷ್ಟ್ರೀಯವಾಗಿ, ಕೇಂದ್ರ ಸರ್ಕಾರ ತುರ್ತು ಕೋವಿಡ್ ನಿರ್ವಹಣಾ ಪ್ಯಾಕೇಜ್ 1ರಲ್ಲಿ ಇದುವರೆಗೆ ಬಿಡುಗಡೆ ಮಾಡಿರುವ 6 ಸಾವಿರದ 075 ಕೋಟಿ ರೂಪಾಯಿಗಳಲ್ಲಿ ಇದುವರೆಗೆ ರಾಜ್ಯಗಳು ಸಾವಿರದ 679 ಕೋಟಿ ರೂಪಾಯಿಗಳನ್ನು ಅಥವಾ ಕೇವಲ ಶೇಕಡಾ 27ರಷ್ಟು ನಿಧಿಯನ್ನು ಮಾತ್ರ ಬಳಸಿಕೊಂಡಿವೆ. ಕೋವಿಡ್-19ನಿಂದ ಎದುರಾಗುತ್ತಿರುವ ಸಮಸ್ಯೆ, ಅಡೆತಡೆಗಳನ್ನು ನಿವಾರಿಸಲು, ಪತ್ತೆಹಚ್ಚಿ ಜನತೆಗೆ ಆರೋಗ್ಯ ಸೌಕರ್ಯ ನೀಡಲು ಆಗಿದ್ದು ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು ಬಲವರ್ಧಿಸಲು ತುರ್ತು ಬಳಕೆಗೆ ಈ ಹಣವನ್ನು ಕೇಂದ್ರ ಬಿಡುಗಡೆ ಮಾಡಿತ್ತು.
ರಾಜಸ್ತಾನ ಶೇಕಡಾ 5ಕ್ಕಿಂತ ಕಡಿಮೆ ಹಣವನ್ನು ಬಳಕೆ ಮಾಡಿಕೊಂಡು ಕೆಳ ಸ್ಥಾನದಲ್ಲಿದೆ. ಉತ್ತರ ಪ್ರದೇಶ ರಾಜ್ಯ ಕೇವಲ ಶೇಕಡಾ 9ರಷ್ಟನ್ನು ಮಾತ್ರ ಬಳಸಿಕೊಂಡು ಕೆಳಮಟ್ಟದಲ್ಲಿದೆ. ಬಿಹಾರ ರಾಜ್ಯದಲ್ಲಿ ಮಾತ್ರ ಕೋವಿಡ್-19 ಆರೋಗ್ಯ ವ್ಯವಸ್ಥೆಗೆ ಕೇಂದ್ರದಿಂದ ಬಿಡುಗಡೆ ಮಾಡಲಾದ ಹಣದಲ್ಲಿ ಶೇಕಡಾ 18ರಷ್ಟು ಬಳಕೆ ಮಾಡಿಕೊಳ್ಳಲಾಗಿದೆ. ಕೇರಳ ರಾಜ್ಯ ಶೇಕಡಾ 20ರಷ್ಟು ಬಳಕೆ ಮಾಡಿಕೊಂಡಿದೆ.
ECRP II ರ ಅಡಿಯಲ್ಲಿ, ಕೇಂದ್ರವು ಭಾರತದಾದ್ಯಂತ ಆರೋಗ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ನವೀಕರಿಸಲು 15,000 ಕೋಟಿ ರೂಪಾಯಿಗಳ ನಿಧಿಯನ್ನು ನೀಡಿತ್ತು. ರಾಜ್ಯಗಳು ಕೂಡ ಜುಲೈ 1, 2021 ರಿಂದ ಮಾರ್ಚ್ 31, 2022 ರ ನಡುವೆ ಒಟ್ಟಾರೆಯಾಗಿ 8,123 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬೇಕಾಗುತ್ತದೆ.
ತನ್ನ ಪಾಲಿನಿಂದ ರಾಜ್ಯಗಳಿಗೆ ಕೇವಲ ಶೇಕಡಾ 26ರಷ್ಟನ್ನು ಮಾತ್ರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂಬ ಹೇಳಿಕೆಗಳನ್ನು ನಿರಾಕರಿಸಿರುವ ಕೇಂದ್ರ ಸರ್ಕಾರ, ಕಳೆದ ವರ್ಷ ಆಗಸ್ಟ್ ವೇಳೆಗೆ ಅದು ತನ್ನ ಪಾಲಿನ ಶೇಕಡಾ 50ರಷ್ಟು ಬಿಡುಗಡೆ ಮಾಡಿದೆ. ಉಳಿದ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ ಕನಿಷ್ಠ ಶೇಕಡಾ 50 ನಿಧಿಯ ಪ್ರಗತಿ ಮತ್ತು ಬಳಕೆಯ ಆಧಾರದ ಮೇಲೆ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇಲ್ಲಿಯವರೆಗೆ, ಕೇವಲ ಐದು ರಾಜ್ಯಗಳು ದೆಹಲಿ, ಪಂಜಾಬ್, ಹರಿಯಾಣ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳು ಮಾತ್ರ ಕೇಂದ್ರದ ನಿಧಿಯ ಶೇಕಡಾ 50ನ್ನು ಬಳಕೆ ಮಾಡಿಕೊಂಡಿವೆ. ಬಿಡುಗಡೆಯಾದ ಕೇಂದ್ರ ನಿಧಿಯ ಶೇಕಡಾ 138 ರಷ್ಟು ಖರ್ಚು ಮಾಡಿರುವ ದೆಹಲಿ ಸರ್ಕಾರ ನಿಗದಿತಕ್ಕಿಂತ ಹೆಚ್ಚಿನ ಮೊತ್ತವನ್ನು ತನ್ನದೇ ಬೊಕ್ಕಸದಿಂದ ನೀಡಿದೆ.
ಆತಂಕಕಾರಿಯಾಗಿ, ಈಶಾನ್ಯ, ಗೋವಾ ಮತ್ತು ಸಿಕ್ಕಿಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಂತಹ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇಲ್ಲಿಯವರೆಗೆ ಯಾವುದೇ ಹಣವನ್ನು ಖರ್ಚು ಮಾಡಿಲ್ಲ, ಯೋಜನೆಯ ಅಡಿಯಲ್ಲಿ ಶೇಕಡಾ 2ಕ್ಕಿಂತ ಕಡಿಮೆ ಖರ್ಚು ಮಾಡಿವೆ.