ಮಧೂರು: ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ದಿನಗಳಲ್ಲಿ ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ನಿಶ್ಚಿತ ಹಾಗು ಸ್ಪಷ್ಟ ಗುರಿ ಸಾಧನೆಯತ್ತ ಸಾಗುವುದರ ಜೊತೆಗೆ ಸತ್ಪ್ರಜೆಯಾಗಿ ರೂಪುಗೊಳ್ಳಬೇಕೆಂದು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಪ್ರಮೋದ್ ಟಿ.ಬೇಕಲ್ ಹೇಳಿದರು.
ಬೀರಂತಬೈಲಿನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸಭಾ ಭವನದಲ್ಲಿ ಆಯೋಜಿಸಿದ ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ 2020-2021 ರ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ವಿಧ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಸರಗೋಡು ನಗರಸಭಾ ಸದಸ್ಯೆ ರಂಜಿತ ಮೋಹನದಾಸ್ ಕೊರಕ್ಕೊಡು ಅವರು ಮಾತನಾಡಿ ನಿರಂತರ ಅಧ್ಯಯನ ಮತ್ತು ಆತ್ಮಸ್ಥೈರ್ಯ ಬೆಳೆಸಿಕೊಂಡು ಸಾಧನೆ ಸಾಕಾರಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ 35 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಧ್ಯಾರ್ಥಿವೇತನ ವಿತರಿಸಲಾಯಿತು.
ಜಿಲ್ಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅವರು ಅಧ್ಯಕ್ಷತೆ ವಹಿಸಿದರು. ಗೌರವ ಅಧ್ಯಕ್ಷ ನಿರಂಜನ ಕೊರಕೋಡು, ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ, ಕೋಶಾಧಿಕಾರಿ ಸತೀಶ್ ಮಾಸ್ತರ್, ಕಾರ್ಯದರ್ಶಿ ಸತೀಶ್ ದೋಣಿಬಾಗಿಲು ಮೊದಲಾದವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಮಲಾಕ್ಷ ಅಣಂಗೂರು ಸ್ವಾಗತಿಸಿ, ಚಂಚಲ ವಿದ್ಯಾನಂದ ಹೂಡೆ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕೂಡ್ಲು ವಂದಿಸಿದರು.