ನವದೆಹಲಿ : ಕೇಂದ್ರ ಸರ್ಕಾರವು ತನ್ನ ಎಲ್ಲ ನೀತಿಗಳನ್ನು ಯುವಜನರನ್ನು ಗುರಿಯಾಗಿಸಿ ರೂಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ರಾಷ್ಟ್ರೀಯ ಬಾಲಪುರಸ್ಕಾರ' ಪ್ರಶಸ್ತಿ ಪುರಸ್ಕೃತರು ಕೇಂದ್ರದ 'ವೋಕಲ್ ಫಾರ್ ಲೋಕಲ್' ಅಭಿಯಾನವನ್ನು ಬೆಂಬಲಿಸಬೇಕು ಎಂದೂ ಸಲಹೆ ಮಾಡಿದರು.
ನವದೆಹಲಿ : ಕೇಂದ್ರ ಸರ್ಕಾರವು ತನ್ನ ಎಲ್ಲ ನೀತಿಗಳನ್ನು ಯುವಜನರನ್ನು ಗುರಿಯಾಗಿಸಿ ರೂಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ರಾಷ್ಟ್ರೀಯ ಬಾಲಪುರಸ್ಕಾರ' ಪ್ರಶಸ್ತಿ ಪುರಸ್ಕೃತರು ಕೇಂದ್ರದ 'ವೋಕಲ್ ಫಾರ್ ಲೋಕಲ್' ಅಭಿಯಾನವನ್ನು ಬೆಂಬಲಿಸಬೇಕು ಎಂದೂ ಸಲಹೆ ಮಾಡಿದರು.
'ರಾಷ್ಟ್ರೀಯ ಬಾಲಪುರಸ್ಕಾರ' ಪ್ರಶಸ್ತಿ ಪುರಸ್ಕೃತರಿಗೆ ಸೋಮವಾರ ಬ್ಲಾಕ್ ಚೈನ್ ತಂತ್ರಜ್ಞಾನ ಆಧರಿಸಿ ಡಿಜಿಟಲ್ ಪ್ರಮಾಣಪತ್ರವನ್ನು ವಿತರಿಸಿದ ಬಳಿಕ ಅವರೊಂದಿಗೆ ವರ್ಚುವಲ್ ವೇದಿಕೆಯಲ್ಲಿ ಸಂವಾದ ನಡೆಸಿದರು. ಪ್ರಶಸ್ತಿ ಪುರಸ್ಕೃತರಿಗೆ ₹ 1 ಲಕ್ಷ ನಗದು, ಪದಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ.
ನೇತಾಜಿ ಅವರ ಹಾಲೊಗ್ರಾಂ ಪ್ರತಿಮೆ ಅನಾವರಣಗೊಳಿಸಿದ್ದನ್ನು ಉಲ್ಲೇಖಿಸಿ, 'ನೇತಾಜಿ ಅವರಿಂದ ನಾವು ಪಡೆಯುವ ಅತಿ ದೊಡ್ಡ ಸ್ಫೂರ್ತಿ ಎಂದರೆ ಕರ್ತವ್ಯ ಮತ್ತು ದೇಶಮೊದಲು ಎಂಬ ಪ್ರಜ್ಞೆ. ದೇಶಕ್ಕಾಗಿ ನೀವು ಕೂಡಾ ನಿಮ್ಮದೇ ಕರ್ತವ್ಯದ ಹಾದಿಯಲ್ಲಿ ಸಾಗಬೇಕು' ಎಂದು ಪುರಸ್ಕೃತರಿಗೆ ಸಲಹೆ ಮಾಡಿದರು.
ದೇಶಿ ಉತ್ಪನ್ನಗಳ ಬಳಕೆ ಅಭಿಯಾನ (ವೋಕಲ್ ಫಾರ್ ಲೋಕಲ್) ಬೆಂಬಲಿಸಲು ಕೋರಿದ ಅವರು, ನಿಮ್ಮ ಮನೆಗಳಲ್ಲಿರುವ ವಿದೇಶಿ ಉತ್ಪನ್ನಗಳನ್ನು ಗುರುತಿಸಿ, ಪಟ್ಟಿ ಮಾಡಬೇಕು ಎಂದರು. ಹೊಸ ಆವಿಷ್ಕಾರಗಳ ಮೂಲಕ ಯುವಜನರು ದೇಶದ ಅಭಿವೃದ್ಧಿಗೆ ಒತ್ತು ನೀಡುವುದನ್ನು ಕಂಡರೆ ಹೆಮ್ಮೆಯಾಗಲಿದೆ ಎಂದು ಹೇಳಿದರು.
ಇಂದು, ವಿಶ್ವದ ಬಹುತೇಕ ಎಲ್ಲ ಬೃಹತ್ ಕಂಪನಿಗಳ ಸಿಇಒಗಳು ಯುವ ಭಾರತೀಯರೇ ಆಗಿದ್ದಾರೆ. ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿಯೂ ದೇಶದ ಯುವಜನರೇ ಮುಂಚೂಣಿಯಲ್ಲಿ ಇರುವುದನ್ನು ಗಮನಿಸಬಹುದು ಎಂದರು.
ಕೋವಿಡ್ ಲಸಿಕೆ ಅಭಿಯಾನದಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದ ಅವರು, ಮಕ್ಕಳು ತಮ್ಮ ಆಧುನಿಕ ಮತ್ತು ವೈಜ್ಞಾನಿಕ ಚಿಂತನೆಯನ್ನು ಈ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ. ಜನವರಿ 3ರಿಂದ ಇದುವರೆಗೂ ದೇಶದಲ್ಲಿ 4 ಕೋಟಿಗೂ ಹೆಚ್ಚು ಮಕ್ಕಳು ಲಸಿಕೆ ಪಡೆದಿದ್ದು, ಸಮಾಜಕ್ಕೆ ಪ್ರೇರೇಪಣೆಯಾಗಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಹೆಣ್ಣು ಮಗಳ ದಿನ ನಿಮಿತ್ತ ಅವರು ಇದೇ ಸಂದರ್ಭದಲ್ಲಿ ಶುಭಾಶಯ ಕೋರಿದರು.