ನವದೆಹಲಿ: ದೇಶಾದ್ಯಂತ ಬೆಚ್ಚುಬೀಳಿಸಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ಸೌಮ್ಯ ಸೋಂಕು ಎಂದು ಪರಿಗಣಿಸಲ್ಪಟ್ಟರೂ ಕೂಡ ಇದು ದೇಹದ ಕೆಲವು ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ.
ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಕೊರೋನ ವೈರಸ್ ಸೋಂಕು ರೋಗಿಗಳು ಅದರ ರೋಗಲಕ್ಷಣಗಳನ್ನು ತೋರಿಸದಿದ್ದರೂ ಸಹ ಅದರ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.
ಓಮಿಕ್ರಾನ್ ನ್ನು ಪ್ರಪಂಚದಾದ್ಯಂತ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೂಪಾಂತರಿ ಸೋಂಕು ಎಂದು ನಿರ್ಲಕ್ಷಿಸಲಾಗುತ್ತಿದೆ. ಆದರೆ ಈ ರೀತಿಯ ನಿರ್ಲಕ್ಷ್ಯದ ಬಗ್ಗೆ ಜರ್ಮನ್ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೋಗಲಕ್ಷಣಗಳನ್ನು ಸೌಮ್ಯ/ ಕಡಿಮೆ ತೀವ್ರತೆಯ ಸೋಂಕು ಎಂದು ಪರಿಗಣಿಸಲಾಗುತ್ತಿದೆ. ಆದರೆ ಅಧ್ಯಯನವೊಂದರ ಪ್ರಕಾರ, ಓಮಿಕ್ರಾನ್ ಮೇಲ್ನೋಟಕ್ಕೆ ಕಡಿಮೆ ತೀವ್ರತೆ ಹೊಂದಿದ್ದರೂ ದೇಹದ ಅಂಗಗಳನ್ನು ಹಾನಿಗೊಳಿಸುತ್ತದೆ. ಇದಕ್ಕಾಗಿ, SARS-CoV-2 ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ 45 ರಿಂದ 74 ವರ್ಷ ವಯಸ್ಸಿನ ಒಟ್ಟು 443 ಜನರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು ಓಮಿಕ್ರಾನ್ ಸೋಂಕು ತಗುಲಿಸಿಕೊಂಡವರು ಹಾಗೂ ಓಮಿಕ್ರಾನ್ ಸೋಂಕು ರಹಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಓಮಿಕ್ರಾನ್ ಸೋಂಕಿಗೆ ಒಳಗಾಗದ ಜನರಿಗೆ ಹೋಲಿಸಿದರೆ, ಓಮಿಕ್ರಾನ್ ಸೋಂಕಿತರಿಗೆ ಮಧ್ಯಮ ಅವಧಿಯ ಅಂಗ ಹಾನಿ ಕಂಡುಬಂದಿದೆ ಎಂದು ಅದರ ಫಲಿತಾಂಶವು ತೋರಿಸಿದೆ.
ಕೊರೋನಾ ಹೊಸ ರೂಪಾಂತರಿ ಸೋಂಕಿತರಿಗೆ “ಶ್ವಾಸಕೋಶದ ಕಾರ್ಯ ಪರೀಕ್ಷೆಗಳು ಶ್ವಾಸಕೋಶದ ಕಾರ್ಯನಿರ್ವಹಣೆ ಪ್ರಮಾಣದಲ್ಲಿ ಮೂರು ಪ್ರತಿಶತದಷ್ಟು ಕಡಿತವನ್ನು ತೋರಿಸಿದೆ”ಎಂದು ಅಧ್ಯಯನದ ಸಂಶೋಧಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ, ಹೃದಯದ ಶಕ್ತಿಯಲ್ಲಿ ಸರಾಸರಿ 1 ರಿಂದ 2 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ. ರಕ್ತದಲ್ಲಿನ ಪ್ರೋಟೀನ್ ಮಟ್ಟವು 41 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಹೃದಯದ ಮೇಲಿನ ಒತ್ತಡದ ಬಗ್ಗೆ ಹೇಳುತ್ತದೆ.