ಜೆರುಸಲೇಂ: ಒಂದೇ ವ್ಯಕ್ತಿಯಲ್ಲಿ, ಒಂದೇ ವರ್ಷದಲ್ಲಿ ಕೋವಿಡ್‌ನ ಮೂರು ತಳಿಗಳ ಸೋಂಕು ಕಾಣಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಇಸ್ರೇಲ್‌ನ ಖಫಾರ್ ಸಬಾ ಎಂಬ ಪಟ್ಟಣದ ಅಲಾನ್ ಹಾಫ್‌ಗಾಟ್ ಎಂಬ 11 ವರ್ಷದ ಬಾಲಕನಲ್ಲಿ ಮೂರೂ ತಳಿಯ ಸೋಂಕು ಕಾಣಿಸಿಕೊಂಡಿದ್ದು, ಶಾಲೆಯಿಂದ ಆತನನ್ನು 3 ಸಲ ಕ್ವಾರಂಟೈನ್ ಮಾಡಲಾಗಿತ್ತು ಎಂದು 'ದಿ ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
ಒಂದೇ ವ್ಯಕ್ತಿಯಲ್ಲಿ ಒಂದೇ ವರ್ಷದಲ್ಲಿ ಕೋವಿಡ್‌ನ ಮೂರು ತಳಿಗಳು ಕಾಣಿಸಿಕೊಂಡಿರುವುದು ವಿರಳ ಪ್ರಕರಣ ಎನ್ನಲಾಗಿದೆ.
ಅಲಾನ್‌ನಲ್ಲಿ ಕಳೆದ ವರ್ಷದ ಆರಂಭದಲ್ಲಿ ಕೋವಿಡ್‌ನ ಅಲ್ಫಾ ತಳಿ ಕಾಣಿಸಿಕೊಂಡಿತ್ತು. ಮತ್ತೆ ಆರು ತಿಂಗಳು ಬಿಟ್ಟು ಕೋವಿಡ್‌ನ ಡೆಲ್ಟಾ ತಳಿ ಕಾಣಿಸಿಕೊಂಡಿತ್ತು. ತದನಂತರ ಈಗ ಓಮೈಕ್ರಾನ್ ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ.
ಸದ್ಯ ಅಲಾನ್ ಓಮೈಕ್ರಾನ್ ಪೀಡಿತನಾಗಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸಹಜ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
'ನನಗೆ ಮೊದಲ ಬಾರಿಗೆ ಹಾಗೂ ಎರಡನೇ ಬಾರಿಗೆ ಕೊರೊನಾ ಬಂದಾಗ ತೀವ್ರ ಜ್ವರದಿಂದ ಬಳಲಿದ್ದೆ. ಪರಿಸ್ಥಿತಿ ಗಂಭೀರವಾಗಿತ್ತು. ಇದೀಗ ಮತ್ತೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಓಮೈಕ್ರಾನ್ ಕಾಣಿಸಿಕೊಂಡಿದೆ. ಆದರೆ, ಜ್ವರದ ಲಕ್ಷಣಗಳಿಲ್ಲ. ನೆಗಡಿ, ಕೆಮ್ಮು ಮಾತ್ರ ಇದೆ' ಎಂದು ಅಲಾನ್ ಹೇಳಿರುವುದಾಗಿ ವರದಿ ತಿಳಿಸಿದೆ.