ಪುಣೆ: ಪತಂಜಲಿಯ 'ಕೊರೊನಿಲ್' ಉತ್ಪನ್ನವು ಕೋವಿಡ್-19 ಸೋಂಕನ್ನು ಗುಣಪಡಿಸುತ್ತದೆ ಎಂಬುದಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿ ಯೋಗಗುರು ಹಾಗೂ ಉದ್ಯಮಿ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಸ್ಥಳೀಯ ನ್ಯಾಯಾಲಯವು ಪುಣೆಯ ಪೊಲೀಸರಿಗೆ ಆದೇಶ ನೀಡಿದೆ.
ನ್ಯಾಯವಾದಿ ಮದನ್ ಕುರ್‌ಹೆ ಅವರು ಜುನ್ನಾರ್‌ನ ನ ಪ್ರಥಮ ದರ್ಜೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧಿಸಿ ಫೆಬ್ರವರಿ 7ರೊಳಗೆ ವರದಿಯೊಂದನ್ನು ಸಲ್ಲಿಸುವಂತೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪಿ.ವಿ.ಸಪ್ಕಾಳ್ ಅವರು ಜುನ್ನಾರ್‌ನ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ. ಪತಂಜಲಿ ಸಂಸ್ಥಾಪಕ ರಾಮ್ ದೇವ್ ಹಾಗೂ ಆಡಳಿತ ನಿರ್ದೇಶಕ ಬಾಲಕೃಷ್ಣ ಅವರು ತಮ್ಮ ಸಂಸ್ಥೆಯ ಉತ್ಪನ್ನವಾದ 'ಕೊರೋನಿಲ್' ಹಾಗೂ 'ಸ್ವಾಸರಿ' ಕೋವಿಡ್19 ಸೋಂಕನ್ನು ಗುಣಪಡಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆಯೆಂದು ಸುಳ್ಳು ಘೋಷಣೆಗಳನ್ನು ಮಾಡಿದ್ದಾರೆಂದು ಕುರ್‌ಹೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಸೂಕ್ತವಾದ ದೃಢೀಕರಣವಿಲ್ಲದೆ ಔಷಧಿಗಳ ಪ್ರಚಾರ ಹಾಗೂ ಮಾರಾಟ ಮಾಡದಂತೆ ಆಯುಷ್ ಸಚಿವಾಲಯ ಕೂಡಾ ಪತಂಜಲಿ ಸಂಸ್ಥೆಗೆ ಸೂಚಿಸಿದೆಯೆಂದು ದೂರುದಾರರು ನ್ಯಾಯಾಲಯದ ಗಮನಸೆಳೆದಿದ್ದಾರೆ.
ಶಾಸನಾತ್ಮಕ ಸಂಸ್ಥೆಗಳ ಅನುಮೋದನೆ ಹಾಗೂ ದೃಢೀಕರಣಕ್ಕೆ ಮೊದಲೇ ಕೋವಿಡ್-19 ಸೋಂಕಿಗೆ ಔಷಧಿಯನ್ನು ಕಂಡುಹಿಡಿದಿರುವುದಾಗಿ ಆರೋಪಿಗಳು ಘೋಷಿಸಿದ್ದಾರೆಂದು ಕುರ್‌ಹೆ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಜಗತ್ತು ಕೋವಿಡ್19 ಹಾವಳಿ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಆರೋಪಿಗಳು ಹಾಗೂ ಅವರ ಸಂಸ್ಥೆಯು ವ್ಯವಹಾರಿಕ ಉದ್ದೇಶದಿಂದ ಜನರಲ್ಲಿ ಹುಸಿ ಭರವಸೆಯನ್ನು ಉತ್ತೇಜಿಸಿರುವುದು ಬೇಜವಾಬ್ದಾರಿಯುತವಾದುದು ಹಾಗೂ ಕಾನೂನುಬಾಹಿರವೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಬಾಬಾ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 420 (ವಂಚನೆ), 120 (ಬಿ) (ಕ್ರಿಮಿನಲ್ ಸಂಚು), 270 (ದುರುದ್ದೇಶದಿಂದ ಪ್ರಾಣಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವ ಸಾಧ್ಯತೆಯಿರುವಂತಹ ಕೃತ್ಯ) ಹಾಗೂ ಔಷಧಿ ಹಾಗೂ ಮಂತ್ರವಾದದ ಔಷಧಿಗಳ (ಆಕ್ಷೇಪಾರ್ಹ ಜಾಹೀರಾತುಗಳ) ಕಾಯ್ದೆಗೆ ಸಂಬಂಧಿತ ಸೆಕ್ಷನ್‌ಗಳಡಿ ದೂರನ್ನು ದಾಖಲಿಸಲಾಗಿದೆ.