ನವದೆಹಲಿ :ಮಹಿಳೆಯರ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಏರಿಕೆ ಮಾಡಿರುವುದರಲ್ಲಿ 'ದೇಶದ ಪುತ್ರಿ'ಯರನ್ನು ಸಶಶಕ್ತೀಕರಿಸುವ ಉದ್ದೇಶ ಇದೆ. ಇದರಿಂದ ಅವರು ತಮ್ಮ ಶಿಕ್ಷಣ ಪೂರ್ಣಗೊಳಿಸಲು, ವೃತ್ತಿಜೀವನ ರೂಪಿಸಿಕೊಳ್ಳಲು ಹಾಗೂ ಆತ್ಮನಿರ್ಭರರಾಗಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
''ಪುತ್ರ ಹಾಗೂ ಪುತ್ರಿ ಸಮಾನರು ಎಂದು ನಾವು ಭಾವಿಸುತ್ತೇವೆ. ಮಹಿಳೆಯರ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಏರಿಕೆ ಮಾಡುವ ಮೂಲಕ ಅವರು ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಹಾಗೂ ಆತ್ಮನಿರ್ಭರರಾಗಲು ಸಾಧ್ಯವಾಗಬೇಕು ಎಂದು ಸರಕಾರ ಬಯಸುತ್ತದೆ'' ಎಂದರು.
ಪುದುಚೇರಿಯ ಪೆರುತಲೈವರ್ ಕಾಮರಾಜರ್ ಮಣಿಮಂಟಪಂ ಹಾಗೂ ಎಂಎಸ್‌ಎಸ್ ಸಚಿವಾಲಯದ ತಂತ್ರಜ್ಞಾನ ಕೇಂದ್ರವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಬಳಿಕ ಪ್ರಧಾನಿ ಅವರು ಮಾತನಾಡಿದರು. ದೇಶದ ಯುವ ಜನತೆಯ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ ಪ್ರಧಾನಿ ಅವರು, ''ಸ್ಪರ್ಧಿಸಿ ಹಾಗೂ ಜಯಸಿ'' ಎಂಬುದು ನವ ಭಾರತದ ಮಂತ್ರ. ದೇಶದ ಯುವಕರು ಪ್ರತಿ ತಲೆಮಾರಿಗೆ ಸ್ಪೂರ್ತಿಯ ಸೆಲೆಯಾಗಬಹುದು ಎಂದರು.
''50 ಸಾವಿರ ನವೋದ್ಯಮ (ಸ್ಟಾರ್ಟಪ್)ಗಳ ಮೂಲಕ ನವೋದ್ಯಮ ಪರಿಸರ ವ್ಯವಸ್ಥೆಯ ಸುವರ್ಣ ಯುಗಕ್ಕೆ ಭಾರತ ಪ್ರವೇಶಿಸುತ್ತಿದೆ. ಇದರಲ್ಲಿ 10 ಸಾವಿರ ನವೋದ್ಯಮಗಳು ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಕಳೆದ 6ರಿಂದ 7 ತಿಂಗಳಲ್ಲಿ ಆರಂಭವಾಗಿದೆ. ಸ್ಪರ್ಧಿಸಿ ಹಾಗೂ ಜಯ ಗಳಿಸಿ ಎಂಬುದು ನವ ಭಾರತದ ಮಂತ್ರ'' ಎಂದು ಪ್ರಧಾನಿ ಹೇಳಿದರು.
''ಇಂದಿನ ಯುವ ಜನತೆ ಪ್ರತಿ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿದೆ. ಭಾರತವು ಡಿಜಿಟಲ್ ಪಾವತಿಯಲ್ಲಿ ಸಾಕಷ್ಟು ಮುಂದುವರಿದಿರುವುದಕ್ಕೆ ಯುವಕರ ಶಕ್ತಿ ಕಾರಣ. ಇಂದು ಭಾರತದ ಯುವಕರು ಜಾಗತಿಕ ಸಮೃದ್ಧಿಯ ಸಂಹಿತೆಯನ್ನು ಬರೆಯುತ್ತಿದ್ದಾರೆ'' ಎಂದು ಪ್ರಧಾನಿ ಅವರು ಹೇಳಿದರು.