ನವದೆಹಲಿ :ಪೆಗಾಸಸ್ ಸ್ಪೈವೇರ್ ಅನ್ನು ಭಾರತ ಸರಕಾರವು ದೇಶದ ಕೆಲ ಪ್ರಮುಖ ವ್ಯಕ್ತಿಗಳು, ವಕೀಲರು, ಹೋರಾಟಗಾರರು ಹಾಗೂ ರಾಜಕಾರಣಿಗಳ ವಿರುದ್ಧ ಬಳಸಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿತ ಸಮಿತಿ ಮುಂದೆ ಹಾಜರಾದ ಕನಿಷ್ಠ ಇಬ್ಬರು ಸೈಬರ್ ಸೆಕ್ಯುರಿಟಿ ಸಂಶೋಧಕರು, ಈ ಸ್ಪೈವೇರ್ ಅನ್ನು ಅರ್ಜಿದಾರರ ಸಾಧನಗಳಲ್ಲಿ ಬಳಸಲಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ನ್ಯಾಯಾಲಯಕ್ಕೆ ಪೆಗಾಸಸ್ ಕುರಿತು ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದ ಕೆಲವರು ಈ ಸೈಬರ್ ಸೆಕ್ಯುರಿಟಿ ತಜ್ಞರನ್ನು ನಿಯೋಜಿಸಿ ಅವರ ಮೂಲಕ ನ್ಯಾಯಾಲಯಕ್ಕೆ ಅವರು ನಡೆಸಿದ ಫೊರೆನ್ಸಿಕ್ ವಿಶ್ಲೇಷಣೆಯ ವಿವರಗಳನ್ನು ಒದಗಿಸಿದ್ದರು.
ಇಬ್ಬರು ಸೈಬರ್ ತಜ್ಞರಲ್ಲಿ ಒಬ್ಬರು ಕನಿಷ್ಠ ಏಳು ಮಂದಿಯ ಐಫೋನ್‍ಗಳನ್ನು ಪರಿಶೀಲಿಸಿದ್ದು ಅವುಗಳಲ್ಲಿ ಇಬ್ಬರ ಫೋನ್‍ಗಳು ಸ್ಪೈವೇರ್‍ನಿಂದ ಬಾಧಿತವಾಗಿತ್ತು ಎಂದು ತಿಳಿದು ಬಂದಿದೆ ಎಂದು ತಜ್ಞರೊಬ್ಬರು ಪತ್ರಿಕೆಯೊಂದಕ್ಕೆ ನೀಡಿದ ಮಾಹಿತಿಯಿಂದ ತಿಳಿದು ಬಂದಿದೆ.
ಒಬ್ಬ ಅರ್ಜಿದಾರರ ಫೋನ್ ಪೆಗಾಸಸ್‍ಬನಿಂದ ಎಪ್ರಿಲ್ 2018ರಲ್ಲಿ ಬಾಧಿತವಾಗಿದ್ದರೆ ಇನ್ನೊಂದು ಫೋನ್ ಜೂನ್ ಮತ್ತು ಜುಲೈ 2021ರ ನಡುವೆ ಹಲವು ಬಾರಿ ಬಾಧಿತವಾಗಿತ್ತು ಎಂದು ಹೇಳಲಾಗಿದೆ.
ಇನ್ನೊಬ್ಬ ಸೈಬರ್ ಸೆಕ್ಯುರಿಟಿ ತಜ್ಞರು ಆರು ಮಂದಿ ಅರ್ಜಿದಾರರ ಆಂಡ್ರಾಯ್ಡ್ ಫೋನ್‍ಗಳನ್ನು ಪರಿಶೀಲಿಸಿದ್ದು ನಾಲ್ಕು ಫೋನ್‍ಗಳಲ್ಲಿ ಈ ಮಾಲ್‍ವೇರ್ ಕಂಡುಹಿಡಿದರೆ ಇತರ ಎರಡು ಸಾಧನಗಳಲ್ಲಿ ಮೂಲ ಪೆಗಾಸಸ್‍ನ ಬೇರೆ ಆವೃತ್ತಿಗಳಿದ್ದವು ಎಂದು ಪತ್ರಿಕೆ ವರದಿ ಮಾಡಿದೆ.
ಈ ಸಾಫ್ಟ್ ವೇರ್ ಯಾರ ಫೋನ್ ಅನ್ನಾದರೂ ಬಾಧಿಸಿದ್ದಲ್ಲಿ ಆದು ಆ ಫೋನ್‍ನಲ್ಲಿರುವ ಚಾಟ್‍ಗಳನ್ನು ಓದಬಹುದು, ವೀಡಿಯೋಗಳನ್ನು ನೋಡಬಹುದು ಹಾಗೂ ಆಡಿಯೋ ಮತ್ತು ವೀಡಿಯೋವನ್ನು ಯಾವುದೇ ಸಮಯದಲ್ಲಿ ಆನ್ ಮಾಡಬಹುದಾಗಿದೆ ಎಂದು ಸೈಬರ್ ತಜ್ಞ ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ಕಳೆದ ವರ್ಷದ ಅಕ್ಟೋಬರ್ 27ರಂದು ಸುಪ್ರೀಂ ಕೋರ್ಟ್ ನಿವೃತ್ತ ಸುಪ್ರೀಂ ನ್ಯಾಯಾಧೀಶ ಜಸ್ಟಿಸ್ ಆರ್ ವಿ ರವೀಂದ್ರನ್ ಅವರ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ಪೆಗಾಸಸ್ ಕುರಿತು ಕೋರ್ಟ್ ಉಸ್ತುವಾರಿಯಲ್ಲಿ ತನಿಖೆಗೆ ನೇಮಿಸಿತ್ತು.