ನವದೆಹಲಿ :ಕೇಂದ್ರ ಗೃಹ ಸಚಿವಾಲಯವು ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆಯನ್ವಯ ನೋಂದಣಿಗಳನ್ನು ನವೀಕರಣಗೊಳಿಸದೇ ಇರುವ 6000 ಎನ್‍ಜಿಒಗಳ ಪೈಕಿ ಹಿಂದು ಧಾರ್ಮಿಕ ಸಂಸ್ಥೆಗಳಾದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ), ಶಿರ್ಡಿ ಸಾಯಿಬಾಬಾ ಸಂಸ್ಥಾನ್ ಟ್ರಸ್ಟ್ ಹಾಗೂ ರಾಮಕೃಷ್ಣ ಮಿಷನ್ ಕೂಡ ಸೇರಿವೆ ಎಂದು Thewire.in ವರದಿ ಮಾಡಿದೆ.
ಟಿಟಿಡಿ ಜಗದ್ವಿಖ್ಯಾತ ತಿರುಪತಿ ವೆಂಕಟೇಶ್ವರ ದೇವಸ್ಥಾನದ ನಿರ್ವಹಣೆ ನೋಡಿಕೊಳ್ಳುತ್ತಿದೆ. ಟಿಟಿಡಿ ಮತ್ತು ರಾಮಕೃಷ್ಣ ಮಿಷನ್ ಹಿಂದು ಧಾರ್ಮಿಕ ಸಂಘಟನೆಗಳು ಎಂದು ನೋಂದಣಿಯಾಗಿದ್ದರೆ, ಶಿರ್ಡಿ ಸಾಯಿಬಾಬಾ ಸಂಸ್ಥಾನ್ ಟ್ರಸ್ಟ್ ಇತರ ಧಾರ್ಮಿಕ ವಿಭಾಗದಲ್ಲಿವೆ. ಆದರೆ ಈ ಮೂರು ಸಂಸ್ಥೆಗಳ ನೋಂದಣಿ ನವೀಕರಣಗೊಂಡಿಲ್ಲ.
ಆದರೆ ಇವುಗಳು ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಸಿದ್ದವೇ ಅಥವ ಗೃಹ ಸಚಿವಾಲಯ ನೋಂದಣಿ ನವೀಕರಿಸಲು ನಿರಾಕರಿಸಿದೆಯೇ ಎಂಬುದು ಸ್ಪಷ್ಟವಿಲ್ಲ.
ಒಟ್ಟು 179 ಎನ್‍ಜಿಒಗಳ ಎಫ್‍ಸಿಆರ್‌ಎ ನೋಂದಣಿಗಳನ್ನು ನವೀಕರಿಸಲು ನಿರಾಕರಿಸಲಾಗಿದೆ ಹಾಗೂ 5789 ಎನ್‍ಜಿಒಗಳು ನೋಂದಣಿ ನವೀಕರಣಕ್ಕಾಗಿ ಕೊನೆಯ ದಿನಾಂಕವಾದ ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಿಲ್ಲ ಎಂದು ಗೃಹ ಸಚಿವಾಲಯ ಕಳೆದ ವಾರ ಹೇಳಿತ್ತು.
ಮದರ್ ತೆರೆಸಾ ಅವರು ಸ್ಥಾಪಿಸಿರುವ ಮಿಷನರೀಸ್ ಆಫ್ ಚ್ಯಾರಿಟಿಯ ಎಫ್‍ಸಿಆರ್‌ಎ ನೋಂದಣಿಯನ್ನು ನವೀಕರಿಸಲಾಗಿಲ್ಲ ಎಂದು ಕಳೆದ ವಾರ ಗೃಹ ಸಚಿವಾಲಯ ಹೇಳಿತ್ತು.
ಟಿಟಿಡಿ ಸಲ್ಲಿಸಿದ ವಾರ್ಷಿಕ ವರದಿ ಪ್ರಕಾರ ಅದರ ಬ್ಯಾಂಕ್ ಖಾತೆಯಲ್ಲಿ ರೂ 13.4 ಕೋಟಿ ವಿದೇಶಿ ದೇಣಿಗೆಯಿದ್ದರೆ ಶಿರ್ಡಿ ಸಾಯಿ ಬಾಬಾ ಸಂಸ್ಥಾನ್ ಟ್ರಸ್ಟ್‍ನ ಬ್ಯಾಂಕ್ ಖಾತೆಯಲ್ಲಿ ವಿದೇಶಿ ದೇಣಿಗೆ ಪ್ರಮಾಣ ರೂ 5 ಕೋಟಿಗೂ ಹೆಚ್ಚಿದೆ ಎಂದು ವರದಿ ಉಲ್ಲೇಖಿಸಿದೆ.