ನವದೆಹಲಿ: ಆಹಾರ ಭದ್ರತೆ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳು ವಲಸೆ ಕಾರ್ಮಿಕರಿಗೆ ತಲುಪುವಂತೆ ಮಾಡಲು ನೀಡಿದ್ದ ಆದೇಶದ ಅನುಷ್ಠಾನ ಕೋರಿ ವಿವಿಧ ಸಾಮಾಜಿಕ ಹೋರಾಟಗಾರರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಲು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.

ಕೊರೊನಾ ವೈರಸ್‌ನ ಓಮೈಕ್ರಾನ್ ತಳಿಯಿಂದಾಗಿ ಕಾಣಿಸಿಕೊಂಡಿರುವ ಕೋವಿಡ್-19ನ 3ನೇ ಅಲೆ ಹಾಗೂ ಈ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಜಾರಿಗೊಳಿಸಿರುವ ನಿರ್ಬಂಧಗಳಿಂದಾಗಿ ವಲಸೆ ಕಾರ್ಮಿಕರು ಮತ್ತೊಮ್ಮೆ ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ತುರ್ತಾಗಿ ಅರ್ಜಿಯ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, 'ನಿಮ್ಮ ಮನವಿಯನ್ನು ಪರಿಗಣಿಸುವೆ' ಎಂದರು.
ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸಂಬಂಧಿಸಿ 2020ರಲ್ಲಿ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಅಂಜಲಿ ಭಾರದ್ವಾಜ್, ಹರ್ಷ ಮಂದರ್ ಹಾಗೂ ಜಗದೀಪ್ ಛೋಕರ್ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸುವಂತೆ ಪ್ರಶಾಂತ್ ಭೂಷಣ್ ಮನವಿ ಮಾಡಿದರು.
'ವಲಸೆ ಕಾರ್ಮಿಕರ ಆಹಾರಕ್ಕೆ ಸಂಬಂಧಿಸಿದ ವಿಷಯ ಇದಾಗಿದೆ. ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಬೇಕು, ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಬೇಕು ಎಂದು ಕೋರ್ಟ್ ಸೂಚಿಸಿತ್ತು. ಆದರೆ, ಏಳು ತಿಂಗಳು ಗತಿಸಿದ್ದರೂ ಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸಲಾಗಿಲ್ಲ. ಈಗ ಓಮೈಕ್ರಾನ್ ತಳಿ ಸೋಂಕಿನ ಹಿನ್ನೆಲೆಯಲ್ಲಿ ಮತ್ತೆ ನಿರ್ಬಂಧಗಳನ್ನು ಹೇರಲಾಗಿದ್ದು, ವಲಸೆ ಕಾರ್ಮಿಕರು ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾಗಿದ್ದಾರೆ' ಎಂದು ಅವರು ಸುಪ್ರೀಂಕೋರ್ಟ್‌ಗೆ ತಿಳಿಸಿದರು.