ನವದೆಹಲಿ: ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಆಚರಣೆಗಳು ಇಲ್ಲದಿರಬಹುದು, ಆದರೆ ಉತ್ಸಾಹವು ಎಂದಿನಂತೆ ಮುಂದುವರೆಯಲಿದೆ. ನಾವು ಕೊರೋನಾವೈರಸ್ ವಿರುದ್ಧ ಸಾಟಿಯಿಲ್ಲದ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಲು ಹೆಮ್ಮೆಪಡುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
73ನೇ ಗಣರಾಜ್ಯೋತ್ಸವದ ಮುನ್ನಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ಕೋವಿಂದ್, ಕಷ್ಟದ ಸಮಯದಲ್ಲಿ ಮಾತ್ರ ರಾಷ್ಟ್ರದ ಸ್ಥಿತಿಸ್ಥಾಪಕತ್ವವು ಹೊರಹೊಮ್ಮುತ್ತದೆ ಎಂದರು. ನಮ್ಮ ಪ್ರಜಾಪ್ರಭುತ್ವದ ವೈವಿಧ್ಯತೆ ಮತ್ತು ಚೈತನ್ಯ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಈ ಏಕತೆ ಮತ್ತು ಒಂದು ರಾಷ್ಟ್ರ ಎಂಬ ಮನೋಭಾವವನ್ನು ಪ್ರತಿ ವರ್ಷ ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಭಾರತದ ತಳಹದಿಯಾಗಿದೆ ಮತ್ತು ಸಂವಿಧಾನದಲ್ಲಿ ಉಲ್ಲೇಖಿಸಲಾದ ಮೂಲಭೂತ ಕರ್ತವ್ಯಗಳ ಪಾಲನೆಯು ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಭಿಪ್ರಾಯಪಟ್ಟರು.
ಇದೇ ವೇಳೆ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿದರು. “ಸ್ವರಾಜ್ಯದ ಕನಸನ್ನು ಬೆನ್ನಟ್ಟುವಲ್ಲಿ ಅಪ್ರತಿಮ ಧೈರ್ಯವನ್ನು ತೋರಿದ ಮತ್ತು ಈ ಉದ್ದೇಶ ಈಡೇರಿಸುವ ಸಲುವಾಗಿ ಜನರನ್ನು ಹೋರಾಟಕ್ಕೆ ಸ್ಫೂರ್ತಿ ನೀಡಿದ್ದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನೂ ಈ ಸಂದರ್ಭದಲ್ಲಿ ಸ್ಮರಿಸೋಣ ಎಂದು ಹೇಳಿದರು.
“ಎರಡು ದಿನಗಳ ಹಿಂದೆ, ಜನವರಿ 23 ರಂದು ನಾವೆಲ್ಲರೂ ‘ಜೈ ಹಿಂದ್’ ಎಂಬ ಶಕ್ತಿಯುತ ಮಂತ್ರವನ್ನು ಅಳವಡಿಸಿಕೊಂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಆಚರಿಸಿದ್ದೇವೆ. ಅವರ ಸ್ವಾತಂತ್ರ್ಯದ ಅನ್ವೇಷಣೆ ಮತ್ತು ಭಾರತವನ್ನು ಹೆಮ್ಮೆಪಡುವ ಅವರ ಮಹತ್ವಾಕಾಂಕ್ಷೆಯು ನಮಗೆಲ್ಲರಿಗೂ ಸ್ಫೂರ್ತಿ ನೀಡಿತು ಎಂದು ನೇತಾಜಿಯನ್ನು ರಾಷ್ಟ್ರಪತಿ ಕೋವಿಂದ್ ನೆನಪಿಸಿಕೊಂಡರು.