ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಸೀಮಾ ನಿರ್ಣಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಧಾನಸಭೆ ಚುನಾವಣೆ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಭರವಸೆ ನೀಡಿದ್ದಾರೆ.
ದೇಶದ ಮೊದಲ 'ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕ' ವರ್ಚುವಲ್ ಆಗಿ ಬಿಡುಗಡೆ ಮಾಡಿದ ಅವರು, 'ಜಮ್ಮು ಮತ್ತು ಕಾಶ್ಮೀರವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ' ಎಂದು ಹೇಳಿದರು.
'ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗಡಿ ನಿರ್ಣಯದ ಪ್ರಕ್ರಿಯೆ ಆರಂಭಗೊಂಡಿದ್ದು, ಅದು ಪೂರ್ಣಗೊಂಡ ಬಳಿಕ ವಿಧಾನಸಭೆ ಚುನಾವಣೆಯನ್ನು ನಡೆಸುತ್ತೇವೆ' ಎಂದು ಹೇಳಿದರು.
'ಕೆಲವರು ಅನೇಕ ವಿಷಯಗಳನ್ನು ಹೇಳಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ಸಂಸತ್ತಿನಲ್ಲಿ ನಾನು ಭರವಸೆ ಕೊಟ್ಟಿದ್ದೇನೆ. ಅಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು' ಎಂದು ಹೇಳಿದರು.
'ಕೆಲವು ಜನರು ಗೊಂದಲ ಮಾಡಲು ಬಯಸುತ್ತಾರೆ. ಆದರೆ ಕಣಿವೆಯ ಜನರು ಅವರ ಬಲೆಗೆ ಬೀಳದಂತೆ ಪ್ರತಿಯೊಬ್ಬರನ್ನು ವಿನಂತಿಸುತ್ತೇನೆ' ಎಂದು ಹೇಳಿದ್ದಾರೆ.
'ಪ್ರಜಾಪ್ರಭುತ್ವದ ಮೂಲಕವೇ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಹೊಂದಲು ಸಾಧ್ಯ. ಯುವ ಜನಾಂಗ ಹೆಚ್ಚಿನ ಉದ್ಯೋಗಗಳನ್ನು ಗಳಿಸಬಹುದಾಗಿದೆ' ಎಂದು ಹೇಳಿದರು.