ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ತಮ್ಮ ಸಾಮಾಜಿಕ ಬ್ಲಾಗಿಂಗ್ ತಾಣಗಳನ್ನು ಯಾರೂ ದುರ್ಬಳಕೆ ಮಾಡಬಾರದು ಎಂಬ ದೃಷ್ಠಿಯಿಂದ ಕೂ ಮತ್ತು ಟ್ವಿಟರ್ ಸಂಸ್ಥೆಗಳು ಸ್ವಯಂಪ್ರೇರಿವಾಗಿ ಕೆಲವು ಕ್ರಮಗಳನ್ನು ಘೋಷಿಸಿವೆ.
ಚುನಾವಣೆ ಸಂಬಂಧಿಸಿದ ಚರ್ಚೆಗಳು ದುರ್ಬಳಕೆ ಆಗದಂತೆ ತಡೆಯುವ ಸಲುವಾಗಿ ಸ್ವಯಂಪ್ರೇರಿತವಾಗಿ ನೀತಿ ಸಂಹಿತೆಗಳನ್ನು ಅಳವಡಿಸಿಕೊಂಡಿರುವುದಾಗಿ ಸಾಮಾಜಿಕ ಬ್ಲಾಗಿಂಗ್ ತಾಣ 'ಕೂ' ಹೇಳಿದೆ.
'ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಫೆಬ್ರುವರಿಯಿಂದ ಮಾರ್ಚ್‌ವರೆಗೆ ಚುನಾವಣೆ ನಿಗದಿ ಆಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ಬಳಕೆದಾರರಿಗೆ ಸುರಕ್ಷಿತ ಮತ್ತು ನಿಷ್ಪಕ್ಷಪಾತ ಚುನಾವಣೆಯ ಭರವಸೆಯನ್ನು ಕೂ ಆಯಪ್ ನೀಡುತ್ತಿದೆ' ಎಂದು ಸಂಸ್ಥೆ ಹೇಳಿದೆ.
ಭಾರತದ ಹಲವಾರು ಭಾಷೆಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಅನುವು ಮಾಡಿರುವ ಕೂ ಆಯಪ್, ಚುನಾವಣಾ ಸಂಹಿತೆಯ ಉಲ್ಲಂಘನೆ ಆಗದಂತೆ ತಡೆಯಲು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುವುದಾಗಿ ಹೇಳಿದೆ.
'ಯಾವುದೇ ಪ್ರಜಾಪ್ರಭುತ್ವದ ಹೆಗ್ಗುರುತಾದ ತೊಡಕಿಲ್ಲದ ಮತ್ತು ನ್ಯಾಯಬದ್ಧ ಚುನಾವಣೆ ನಡೆಯುವಂತೆ ಮಾಡುವತ್ತ ಕೆಲಸ ಮಾಡುತ್ತಿದೆ' ಎಂದು ಕೂ ಸಹಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.
ಮಾಹಿತಿ ನೀಡಲು ಟ್ವಿಟರ್ ಕ್ರಮ
ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಮೊದಲು ಮತದಾರರಿಗೆ ಸರಿಯಾದ ತಿಳಿವಳಿಕೆ ನೀಡಲು ಸಾಮಾಜಿಕ ಬ್ಲಾಗಿಂಗ್ ತಾಣ ಟ್ವಿಟರ್ ಹಲವಾರು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಗುರುವಾರ ಘೋಷಿಸಿದೆ.
'ಚುನಾವಣೆ ವೇಳೆ ಮತದಾನ, ಅಭ್ಯರ್ಥಿ ಮತ್ತು ಅವರ ಕಾರ್ಯಸೂಚಿ ಬಗ್ಗೆ ತಿಳಿಯಲು ಜನರು ಟ್ವಿಟರ್‌ಗೆ ಭೇಟಿ ನೀಡುತ್ತಾರೆ. ಜೊತೆಗೆ, ಆರೋಗ್ಯಕರ ಚರ್ಚೆ ಮತ್ತು ಮಾತುಕತೆಯಲ್ಲಿ ತೊಡಗುತ್ತಾರೆ. ಜನರು ತಮ್ಮ ನಾಗರಿಕ ಹಕ್ಕನ್ನು ಚಲಾಯಿಸುವ ವೇಳೆ ಮಾಹಿತಿಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಲು ಟ್ವಿಟರ್ ಬದ್ಧವಾಗಿದೆ' ಎಂದು ಪ್ರಕಟಣೆ ನೀಡಿದೆ.
ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತ ನೀಡುವಂತೆ ಮಾಡುವುದಷ್ಟೇ ನಮ್ಮ ಗುರಿಯಲ್ಲ. ಚುನಾವಣೆಯ ಎಲ್ಲಾ ಪ್ರಕ್ರಿಯೆಯಲ್ಲಿ ಎಲ್ಲಾ ಮತದಾರರು ಭಾಗವಹಿಸುವಂತೆ ಮತ್ತು ಮಾಹಿತಿ ಪಡೆಯುವಂತೆ ಮಾಡುವುದು ನಮ್ಮ ಗುರಿ ಎಂದು ಟ್ವಿಟರ್ ಹೇಳಿದೆ.
ಈ ಉಪಕ್ರಮಗಳ ಭಾಗವಾಗಿ ಟ್ವಿಟರ್ ಇಮೋಜಿಗಳನ್ನು ಪರಿಚಯಿಸಲಿದೆ. ಈ ಇಮೋಜಿಗಳು ಮತದಾನದ ದಿನಾಂಕವನ್ನು ನೆನಪಿಸುತ್ತವೆ. ಚುನಾವಣೆ ಕುರಿತು ಅಧಿಕೃತ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳ ಸರ್ಚ್ ಪ್ರಾಮ್ಟ್‌ಗೆ ಚಾಲನೆ ನೀಡಲಾಗಿದೆ. ಇಂಗ್ಲಿಷ್ ಜೊತೆ ಹಿಂದಿ, ಪಂಜಾಬಿ ಮತ್ತು ಕೊಂಕಣಿ ಭಾಷೆಯಲ್ಲಿ ಕೂಡಾ ಸರ್ಚ್ ಪ್ರಾಮ್ಟ್ ಒದಗಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.
'ರಾಜಕೀಯ ಮತ್ತು ನಾಗರಿಕ ಮಹತ್ವ ಹೊಂದಿರುವ ಘಟನೆಗಳು ಸೇವೆಯ ವಿಚಾರದ ಚರ್ಚೆಯಲ್ಲಿ ಸದಾ ಸ್ಥಾನ ಪಡೆಯುತ್ತವೆ. ಸಾರ್ವಜನಿಕರ ಅಭಿಪ್ರಾಯಗಳು ರೂಪುಗೊಳ್ಳುವುದೇ ಇಂಥ ಚರ್ಚೆಗಳ ಮೂಲಕ. ಹೀಗಾಗಿ ನಾವು ನಮ್ಮ ಮೇಲಿರುವ ಜವಾಬ್ದಾರಿಯನ್ನು ಅರಿತು, ಜನರು ಮತ ಹಾಕಲು ಹೋಗುವ ಮುನ್ನ ಅವರಿಗೆ ಸಮರ್ಪಕ ಮತ್ತು ನಿರ್ದಿಷ್ಟ ಮಾಹಿತಿ ಸಿಗುವಂತೆ ಮಾಡಲಿದ್ದೇವೆ' ಎಂದು ಟ್ವಿಟರ್ ಇಂಡಿಯಾ ಸಾರ್ವಜನಿಕ ನೀತಿ ವ್ಯವಸ್ಥಾಪಕಿ ಪಾಯಲ್ ಕಾಮತ್ ಹೇಳಿದ್ದಾರೆ.