ತಿರುವನಂತಪುರ: ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಹೊಂದಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾಗಳನ್ನು ನೀಡಲು ಕೇರಳ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ನೈಜ ಸಮಯದಲ್ಲಿ ವೀಕ್ಷಿಸಲು ಮತ್ತು ದಾಖಲಿಸಲು ಅವರಿಗೆ ಅನುಮತಿಸುತ್ತದೆ. ಪೊಲೀಸರ ವಿರುದ್ಧ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತಪ್ಪಿತಸ್ಥರನ್ನು ರಕ್ಷಿಸುವಂತೆ ಸ್ವತಃ ಸಂಘಟನೆಗಳ ಮುಖಂಡರೇ ಪತ್ರ, ಶಿಫಾರಸುಗಳೊಂದಿಗೆ ಸಿಎಂ ಕಚೇರಿಗೆ ಬಂದಿರುವ ಉದಾಹರಣೆಗಳಿವೆ. ಇದನ್ನು ಪರಿಗಣಿಸಿ, ಪೊಲೀಸ್ ಪ್ರಧಾನ ಕಚೇರಿಯು ಲೈವ್ ದೃಶ್ಯಗಳ ಮೂಲಕ ನೈಜ ಪರಿಸ್ಥಿತಿಯನ್ನು ಪರಿಶೀಲಿಸಲು ನಿರ್ಧರಿಸಿದೆ.
ಪ್ರಸ್ತುತ, ಸಂಚಾರ ಪೊಲೀಸ್ ಅಧಿಕಾರಿಗಳಿಗೆ 125 ಬಾಡಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಪೊಲೀಸ್ ಅಧಿಕಾರಿಗಳು, ಗಸ್ತು ಅಧಿಕಾರಿಗಳು ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಇದೇ ರೀತಿಯಲ್ಲಿ ಕ್ಯಾಮೆರಾಗಳನ್ನು ನೀಡಲು ಕ್ರಮ ಕ್ಯೆಗೊಳ್ಳಲಾಗುತ್ತದೆ. ಸುಮಾರು 5,000 ಕ್ಯಾಮರಾಗಳನ್ನು ಖರೀದಿಸಬೇಕಾದಿತೆಂದು ಅಂದಾಜಿಸಲಾಗಿದೆ. ಒಂದು ಕ್ಯಾಮರಾಕ್ಕೆ 6 ಸಾವಿರ ರೂ. ಬೆಲೆ ತಗಲಲಿದ್ದು,ಪೋಲೀಸ್ ನವೀಕರಣ ನಿಧಿಯಿಂದ ಕ್ಯಾಮೆರಾ ಖರೀದಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
4G SIM ನ್ನು ಬಳಸಿಕೊಂಡು GSM ವ್ಯವಸ್ಥೆಯ ಮೂಲಕ ಕ್ಯಾಮರಾ ದೃಶ್ಯಾವಳಿ ಮತ್ತು ಧ್ವನಿಯನ್ನು ನಿಯಂತ್ರಣ ಕೊಠಡಿ ಅಥವಾ ಇತರ ಕೇಂದ್ರಕ್ಕೆ ಕಳುಹಿಸಬಹುದು. ಉನ್ನತ ಪೊಲೀಸ್ ಅಧಿಕಾರಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅಥವಾ ನೆಟ್‌ವರ್ಕ್ ಸಂಪರ್ಕ ಹೊಂದಿರುವ ಟಿವಿಗಳಲ್ಲಿ ದೃಶ್ಯಗಳನ್ನು ವೀಕ್ಷಿಸಬಹುದು. ಕ್ಯಾಮೆರಾಗೆ ಅಳವಡಿಸಿರುವ ‘ಪುಶ್ ಟು ಟಾಕ್’ ವ್ಯವಸ್ಥೆಯ ಮೂಲಕ ಕ್ಯಾಮೆರಾ ಅಳವಡಿಸಿದ ಪೊಲೀಸ್ ಅಧಿಕಾರಿಯೊಂದಿಗೂ ಹಿರಿಯ ಅಧಿಕಾರಿ ಮಾತನಾಡಬಹುದು. ಕ್ಯಾಮರಾ ವ್ಯವಸ್ಥೆಯೊಂದಿಗೆ ಗುಂಪಿನೊಳಗೆ ಸದಸ್ಯರು ಪರಸ್ಪರ ಮಾತನಾಡಬಹುದು. ಇದರಲ್ಲಿ ಆಡಿಯೋ ರೆಕಾರ್ಡಿಂಗ್ ಸೌಲಭ್ಯವೂ ಇದೆ.