ಕೋಲ್ಕತ: ಪಶ್ಚಿಮ ಬಂಗಾಳದ ಅರಣ್ಯ ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಅವರು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಜೊತೆ ಕುಳಿತುಕೊಳ್ಳುವುದಿಲ್ಲ ಎಂದು ವೇದಿಕೆಯಿಂದ ಕೆಳಗಿಳಿದ ಘಟನೆ ನಡೆದಿದೆ.
ಬರಾಕ್‌ಪೋರ್ ಪ್ರದೇಶದಲ್ಲಿ ಭಾನುವಾರ ನಡೆದ ಮಹಾತ್ಮ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಜ್ಯೋತಿಪ್ರಿಯ ಮಲ್ಲಿಕ್ ಅವರು ರಾಜ್ಯಪಾಲ ಜಗದೀಪ್ ಧನ್‌ಖರ್ ಅವರ ಜೊತೆಗೆ ವೇದಿಕೆಯಲ್ಲಿ ಆಸೀನರಾಗಿದ್ದರು.
ರಾಜ್ಯಪಾಲರು ಕಾರಣವನ್ನು ಕೇಳಿದಾಗ ಸಚಿವ ಜ್ಯೋತಿಪ್ರಿಯ ಅವರು, 'ವೃತ್ತಿಪರ ಕೊಲೆಗಾರ ನಿಮ್ಮ ಬದಿಯಲ್ಲಿ ಕುಳಿತಿದ್ದಾರೆ. ಇದನ್ನು ವಿರೋಧಿಸಿ ನಾನು ವೇದಿಕೆಯಿಂದ ಹೊರ ನಡೆಯುತ್ತಿದ್ದೇನೆ. ಪ್ರೇಕ್ಷಕರ ಜೊತೆ ಕುಳಿತುಕೊಳ್ಳುತ್ತೇನೆ' ಎನ್ನುವುದು ಕೇಳಿಬಂದಿದೆ.
ಟಿಎಂಸಿ ಕಾರ್ಯಕರ್ತನ ಕೊಲೆ
ಕಳೆದ ಶನಿವಾರ ಬರಾಕ್‌ಪೋರ್‌ನಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಗೋಪಾಲ್ ಮಜುಂದಾರ್ ಅವರ ಹತ್ಯೆ ನಡೆದಿದೆ. ಮನೆಗೆ ಹಿಂತಿರುಗುವ ವೇಳೆ ಮಜುಂದಾರ್ ಅವರ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಗುಂಡು ಹಾರಿಸಿ, ಬಳಿಕ ಹಲವು ಬಾರಿ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಹಿಂದೆ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಇದ್ದಾರೆ ಎಂದು ಆಡಳಿತ ಪಕ್ಷ ಆರೋಪಿಸಿದೆ.
ಕೊಲೆಗೆ ಸಂಬಂಧಿಸಿ ಬಿಜೆಪಿ ನಾಯಕ ಬಿಜೋಯ್ ಮುಖೋಪಧ್ಯಾ ಅವರನ್ನು ಭಾನುವಾರ ಬೆಳಗ್ಗೆ ಬಂಧಿಸಲಾಗಿದೆ.
'ಮಹಾತ್ಮ ಗಾಂಧಿ ಅವರು ಉಪದೇಶಿಸಿದಂತೆ ಅಹಿಂಸೆ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ನಮ್ಮ ಮೇಲೆ ಹಿಂಸಾಕೃತ್ಯಗಳನ್ನು ನಡೆಸುತ್ತಿರುವುದು ಟಿಎಂಸಿ. ಬಣ ವೈಷಮ್ಯಕ್ಕೆ ತನ್ನ ಪಕ್ಷದ ಕಾರ್ಯಕರ್ತರನ್ನೇ ಕೊಲ್ಲುತ್ತಿದೆ' ಎಂದು ಆರೋಪಿಸಿದ ಅರ್ಜುನ್ ಸಿಂಗ್ ಅವರು ವೇದಿಕೆಯಿಂದ ಇಳಿದ ಸಚಿವರ ನಡೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.