HEALTH TIPS

ಕುಂಬ್ಡಾಜೆಯಲ್ಲಿ ಆಧುನಿಕ ಭಗೀರಥರಿಂದ ಜಲಕ್ರಾಂತಿ: ಕಟ್ಟಕಟ್ಟಿ ಪಾರಂಪರಿಕ ಜಲಸಂರಕ್ಷಣೆ ಮುಂದುವರಿಕೆ

                                              

              ಬದಿಯಡ್ಕ: ನೇರಪ್ಪಾಡಿ ಹೊಳೆಗೆ ಕಟ್ಟ ಬಿದ್ದಲ್ಲಿ, ದೂರದ ಏತಡ್ಕ, ಬೆಳಿಂಜ, ಮುನಿಯೂರ್, ಪುತ್ರಕಳ ಸೇರಿದಂತೆ ವಿವಿಧ ಪ್ರದೇಶದ ಜನತೆಗೆ ನೀರಿನ ಬರ ತಪ್ಪದು. ಇದು ಹಲವು ದಶಕಗಳಿಂದ ಕುಂಬ್ಡಾಜೆ ಪಂಚಾಯಿತಿಯ ನೇರಪ್ಪಾಡಿ ಆಸುಪಾಸಿನ ಕೃಷಿಕರ ಅನುಭವದ ಮಾತುಗಳಿವು. ಇಲ್ಲಿನ ಕಟ್ಟಗಳಿಗೆ ಶತಮಾನದ ಇತಿಹಾಸವಿದೆ. 1930ರಲ್ಲಿ ಅಂದಿನ ಮದ್ರಾಸ್ ಸಂಸ್ಥಾನ ಏತಡ್ಕದ ಸನಿಹದ ನೇರಪ್ಪಾಡಿ ತಂಬು ಪ್ರದೇಶದಲ್ಲಿ ಕಟ್ಟ ನಿರ್ಮಿಸಲು ನೀಡಿದ ಅನುಮತಿ ಪತ್ರವನ್ನು ಸ್ಥಳೀಯ ನಿವಾಸಿ ವೆಂಕಟೇಶ್ವರ ಭಟ್ ಅವರು ತಮ್ಮ ಸಂಗ್ರಹದಲ್ಲಿಟ್ಟುಕೊಂಡಿದ್ದಾರೆ.

          ವಾಡಿಕೆಯಂತೆ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಆರಂಭಗೊಳ್ಳುತ್ತಿದ್ದ ಕಟ್ಟ ನಿರ್ಮಾಣ ಕಾಮಗಾರಿ ಈ ವರ್ಷ ಜನವರಿ ತಿಂಗಳಲ್ಲಿ ಆರಂಭಗೊಂಡಿದೆ. ನವೆಂಬರ್ ತಿಂಗಳ ವರೆಗೂ ಅತಿಯಾದ ಮಳೆ ಹಿನ್ನೆಲೆಯಲ್ಲಿ ಈ ಬಾರಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕೆಲಸ ಸಾಧ್ಯವಾಗಿಲ್ಲ ಎಂಬುದಾಗಿ ಇಲ್ಲಿನ ಕೃಷಿಕರು ತಿಳಿಸುತ್ತಾರೆ. ನೇರಪ್ಪಾಡಿ ಹೊಳೆಗೆ ಅಡ್ಡ ಹತ್ತಕ್ಕೂ ಹೆಚ್ಚು ಬೃಹತ್ ಕಟ್ಟಗಳನ್ನು ಕಟ್ಟಲಾಗುತ್ತಿದ್ದರೆ,  ಹಲವಾರು ಸಣ್ಣ ಕಟ್ಟಗಳ ಮೂಲಕ ಹೊಳೆ ದಡದ ಆಸುಪಾಸಿನ ಐದಾರು ಕಿ.ಮೀ ಪ್ರದೇಶದಲ್ಲಿ ಅಂತರ್ಜಲಮಟ್ಟ ಹೆಚ್ಚಲು ಕಾರಣವಾಗುತ್ತಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನೇರಪ್ಪಾಡಿ ಹೊಳೆಗೆ ಕಟ್ಟ ಕಟ್ಟಿಕೊಳ್ಳುವ ಮೂಲಕ ಇಲ್ಲಿನ ಕೃಷಿಕರು ಒಂದೆರಡು ತಿಂಗಳ ಕಾಲ ಕೃಷಿಪ್ರದೇಶಕ್ಕೆ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಕಟ್ಟಗಳ ನಿರ್ಮಾಣದಲ್ಲಿ ನೈಪುಣ್ಯ ಪಡೆದ ಕಾರ್ಮಿಕರು ಇಲ್ಲಿ ಲಭ್ಯರಿದ್ದು,  ಬಹುತೇಕ ಕಟ್ಟಗಳನ್ನು ಇವರೇ ನಿರ್ಮಿಸುತ್ತಾರೆ. ಇದರಿಂದ ಒಂದಾದ ಮೇಲೆ ಇನ್ನೊಂದು ಕಟ್ಟ ನಿರ್ಮಿಸಬೇಕಾಗುತ್ತದೆ. ಪಡ್ರೆಯಿಂದ ತೊಡಗಿ ಓಡಂಗಲ್ಲು, ಪಳ್ಳತ್ತಡ್ಕ ವರೆಗೆ 25ಕ್ಕೂ ಹೆಚ್ಚು ಕಟ್ಟಗಳು ನಿರ್ಮಾಣಗೊಳ್ಳುತ್ತಿದೆ. 


ವಿಪರ್ಯಾಸವೆಂದರೆ, ಈ ಕಟ್ಟಗಳಿಗೆ ಸರ್ಕಾರದ ಅನುದಾನ ಕಿಂಚಿತ್ತೂ ಲಭ್ಯವಾಗುತ್ತಿಲ್ಲ. ನರೆಗಾ ಸಹಕಾರವೂ ಲಭಿಸುತ್ತಿಲ್ಲ. ಕೃಷಿಕರೇ ಸ್ವತ: ಖರ್ಚುಮಾಡಿ ಕಟ್ಟಗಳನ್ನು ನಿರ್ಮಿಸಬೇಕಾಗುತ್ತಿದ್ದು, ಇವರಿಗೆ ಬಹಳಷ್ಟು ಹೊರೆಯಾಗುತ್ತಿದೆ. ಕೆಲವು ವಿಸಿಬಿ(ಕಿಂಡಿ ಅಣೆಕಟ್ಟು)ಗಳಿಗೆ ಬೇಸಿಗೆಯಲ್ಲಿ ಮಣ್ಣುತುಂಬಿ ಹಲಿಗೆ ಅಳವಡಿಸಲು ಲಕ್ಷಾಂತರ ರೂ. ವ್ಯಯಿಸುವಾಗ ಪಾರಂಪರಿಕ ಕಟ್ಟ ನಿರ್ಮಿಸುವವರಿಗೆ ಚಿಕ್ಕಾಸೂ ನೀಡದೆ ಕೃಷಿಕರನ್ನು ನಿರ್ಲಕಷಿಸುತ್ತಿರುವುದು ವ್ಯಾಪಕ ಅಸಮಧಾನಕ್ಕೆ ಕಾರಣವಾಗಿದೆ.

                                   ಕಟ್ಟ ನಿರ್ಮಾಣ ಶ್ರಮದಾಯಕ;

          ಕಟ್ಟಗಳ ನಿರ್ಮಾಣ ಅತ್ಯಂತ ಶ್ರಮದಾಯಕವೂ ಹೌದು. ತಳಭಾಗಕ್ಕೆ ಉಂಡೆಕಲ್ಲು, ಅದರ ಮೇಲೆ ಮಣ್ಣು ಸುರಿದು, ಮರಳಿನ ಚೀಲ ಪೇರಿಸುತ್ತಾ ಬರುತ್ತಾರೆ. ನೀರು ದಾಸ್ತಾನುಗೊಳ್ಳುವ ಭಾಗಕ್ಕೆ ಪ್ಲಾಸ್ಟಿಕ್ ಟಾರ್ಪಾಲಿನ್ ಹೊದಿಸಿ, ಫೈಬರ್ ಶೀಟ್ ಅಳವಡಿಸಲಾಗುತ್ತದೆ. ಒಂದೆರಡು ಅಡಿ ಎತ್ತರಕ್ಕೆ ಅಂಟುಬರಿಸಿದ ಮಣ್ಣು ಪೇರಿಸಿ ಒಂದಿಷ್ಟೂ ನೀರು ಹೊರ ಹರಿಯದಂತೆ ನೋಡಿಕೊಳ್ಳಲಾಗುತ್ತದೆ.  ಸ್ಥಳೀಯ ಕೃಷಿಕರು ನಿರ್ಮಿಸುವ ಪಾರಂಪರಿಕ ಕಟ್ಟಗಳ ಮುಂದೆ ಸರ್ಕಾರ ಲಕ್ಷಾಂತರ ರೂ. ಖರ್ಚುಮಾಡಿ ನಿರ್ಮಿಸುವ ವಿ.ಸಿ.ಬಿ ಸರ್ಕಾರದ ವೈಫಲ್ಯತೆಗೆ ಸಾಕ್ಷಿಯಾಗುತ್ತಿದೆ. ಏತಡ್ಕ ಸನಿಹದ ಕೂಟೆಲು ಎಂಬಲ್ಲಿ ಸರ್ಕಾರ ನಿರ್ಮಿಸಿರುವ ವಿಸಿಬಿ ಇದ್ದರೂ, ಇದರಲ್ಲಿ ನೀರು ದಾಸ್ತಾನು ಸಾಧ್ಯವಾಗುತ್ತಿಲ್ಲ. ಇಲ್ಲಿ ಸ್ಥಳೀಯವಾಗಿ ನಿರ್ಮಿಸುವ ಪಾರಂಪರಿಕ ಕಟ್ಟ ಮಾತ್ರ ಕೃಷಿಕರ ಪಾಲಿಗೆ ವರದಾನವಾಗುತ್ತಿದೆ.

                          ಕಟ್ಟಗಳ ದಿನಾಚರಣೆ:"

           ಕುಂಬ್ಡಾಜೆ ಪಂಚಾಯಿತಿಯ ನೇರಪ್ಪಾಡಿ, ಏತಡ್ಕ ಪ್ರದೇಶವನ್ನು ಕಟ್ಟಗಳ ಜೀವಂತ ಮ್ಯೂಸಿಯಂ ಎಂದೇ ಪರಿಗಣಿಸಲಾಗುತ್ತಿದೆ. ವಿಶೇಷವೆಂದರೆ, ನವೆಂಬರ್ 15ನ್ನು ಇಲ್ಲಿ ಪ್ರತಿ ವರ್ಷ ಕಟ್ಟಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಕೃಷಿಕರೆಲ್ಲರು ಒಂದೆಡೆ ಒಟ್ಟು ಸೇರಿ ಹೊಳೆಗೆ ಕಟ್ಟ ನಿರ್ಮಿಸುವ ಯೋಜನೆ ತಯಾರಿಸಿ, ದಿನಾಂಕ ನಿಗದಿಪಡಿಸುವುದು ಹಾಗೂ ಕೃಷಿ ಸಂಬಂಧಿ ಕಾರ್ಯ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ.

                      'ನೀನೆಪ'ಮಾದರಿ:

           ಓಡುವ ನೀರನ್ನು ನಿಲ್ಲುವಂತೆ,  ನಿಲ್ಲುವ ನೀರನ್ನು ಹರಿಯುವಂತೆ ಮಾಡುವುದು ಜಲಸಾಕ್ಷರತೆಯ ಪಾಠ. ಈ ಪಾಠವನ್ನು  ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಮೂಲಕ ಪಡ್ರೆಯ ಜನತೆ ಇಂದು ನೀರಿನಲ್ಲಿ ಸ್ವಾವಲಂಬಿಗಳಾಗಿದ್ದಾರೆ. 'ನೀರ ನೆಮ್ಮದಿಯತ್ತ ಪಡ್ರೆ'(ನೀನೆಪ)ಎಂಬ ವಾಟ್ಸಪ್ ಗ್ರೂಪ್ ರಚಿಸಿಕೊಂಡಿರುವ ಇಲ್ಲಿನ ಪ್ರಗತಿಪರ ಕೃಷಿಕರ ತಂಡವೊಂದು, ಸಣ್ಣ ಕೃಷಿಕರನ್ನೂ ಜಲಸಾಕ್ಷರರನ್ನಾಗಿಸಿ ಮಾಡಿಕೋಂಡಿದೆ. ಎರಡು ವರ್ಷಗಳ ಹಿಂದೆ ಪಡ್ರೆ ಜನತೆಯನ್ನು ಕಾಡಿದ ನೀರಿನ ಅಭಾವ, ಇಂದು ಅವರನ್ನು ಈ ಮಹತ್ತರ ಕೆಲಸಕ್ಕೆ ಸ್ವಯಂ ಪ್ರೇರಣೆಯಿಂದ ಧುಮುಕುವಂತೆ ಮಾಡಿದೆ. ಪ್ರತಿ ಸಣ್ಣ ತೊರೆ, ತೋಡುಗಳಿಗೆ ಕಟ್ಟಕಟ್ಟಿ, ಹರಿಯುವ ನೀರನ್ನು ತಡೆದು, ಭೂಮಿಗೆ ಇಂಗುವಂತೆ ಮಾಡುವ ಮೂಲಕ ಜಲಸಂರಕ್ಷಣೆಯಲ್ಲಿ ಮಹತ್ವದ ಕೆಲಸ ನಡೆಸುತ್ತಿದ್ದಾರೆ. ಪ್ರಗತಿಪರ ಕೃಷಿಕ, ಅಂಕಣಕಾರ ಶ್ರೀಪಡ್ರೆ, ಕ್ಯಾಂಪ್ಕೋ ಮಾಜಿ ನಿರ್ದೇಶಕ ಶ್ರೀಹರಿ ಭಟ್ ಸಜಂಗದ್ದೆ ಮುಂತಾದವರ ಮಾರ್ಗದರ್ಶನದ ಮೂಲಕ ಈ ಕಾರ್ಯ ನಡೆಯುತ್ತಿದೆ.


                  ಅಭಿಮತ:

        ಕಟ್ಟಗಳ ನಿರ್ಮಾಣ ವರ್ಷ ಕಳೆದಂತೆ ಹೊರೆಯಾಗುತ್ತಿದೆ. ಸರ್ಕಾರದ ಅನುದಾನ ಲಭಿಸದಿರುವುದು ಕೃಷಿಕರನ್ನು ಮತ್ತಷ್ಟು ಕಂಗೆಡಿಸಿದೆ. ಕೃಷಿಕರ ಗುಂಪು ಈ ಕಟ್ಟಗಳ ನಿರ್ಮಾಣಕ್ಕೆ ಹಣ ವ್ಯಯಿಸಬೇಕಾಗುತ್ತಿದೆ. ಸುಮಾರು ಒಂದುವರೆ ಲಕ್ಷ ರೂ. ವೆಚ್ಚದಲ್ಲಿ ವೇಣು ಭಟ್ ಅವರ ಸಹಕಾರದೊಂದಿಗೆ ನೇರಪ್ಪಾಡಿ ಸೇತುವೆ ಸನಿಹದ ಕಟ್ಟ ನಿರ್ಮಾಣವಾಗುತ್ತಿದೆ. ಕಟ್ಟಗಳ ನಿರ್ಮಾಣದ ಜತೆಗೆ,  ಮಳೆಗಾಲ ಆರಂಭಕ್ಕೆ ಮುನ್ನ ಇದರ ತ್ಯಾಜ್ಯ ಹೊಳೆಯಿಂದ ತೆರವುಗೊಳಿಸಿ ಶುಚಿಗೊಳಿಸಬೇಕಾಗುತ್ತದೆ.

ಕೇಶವ ಶರ್ಮ ನೇರಪ್ಪಾಡಿ, ಕೃಷಿಕ

ನೇರಪ್ಪಾಡಿ ಸೇತುವೆ ಸನಿಹದ ಕಟ್ಟದ ರೂವಾರಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries