ನವದೆಹಲಿ: ಪಂಜಾಬ್ನಲ್ಲಿ ಪ್ರಧಾನಮಂತ್ರಿಗಳ ಭೇಟಿ ವೇಳೆ ನಡೆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಪ್ರಧಾನಿ ಮೋದಿ ಬಳಿ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳೊಂದಿಗೆ ನಿನ್ನೆ ಸಂಜೆ ನಡೆಸಿದ ವರ್ಚುವಲ್ ಸಭೆಯಲ್ಲಿ, ಪಾಲ್ಗೊಂಡಿದ್ದ ಮುಖ್ಯಮಂತ್ರಿ ಚನ್ನಿ ಜನವರಿ 5 ರಂದು ತಮ್ಮ ರಾಜ್ಯದಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ವಿಷಾದಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಶಾಯರಿ (ಕವಿತೆ)ಯೊಂದನ್ನು ಹೇಳಿದರು. ‘‘ ಗೌರವಾನ್ವಿತ ಪ್ರಧಾನಿ ಮೋದಿ ಜೀ… ನೀವು ಪಂಜಾಬ್‌ಗೆ ಬಂದಿದ್ದೀರಿ, ನಿಮ್ಮ ಭೇಟಿಯ ವೇಳೆ ನಡೆದ ಘಟನೆಗೆ ನಾವು ವಿಷಾದಿಸುತ್ತೇವೆ. ನಾನು ನಿಮಗಾಗಿ ಒಂದು ಶಾಯರಿ ಹೇಳಲು ಬಯಸುತ್ತೇನೆ. “ತುಮ್ ಸಲಾಮತ್ ರಹೋ ಖಯಾಮತ್ ತಕ್, ಔರ್ ಖುದಾ ಕರೇ ಕಿ ಖಯಾಮತ್ ನ ಹೋ’ (ಪ್ರಪಂಚದ ಕೊನೆಯವರೆಗೂ ಸುರಕ್ಷಿತವಾಗಿರಿ, ಜಗತ್ತು ಅಂತ್ಯಗೊಳ್ಳಲು ಬಿಡಬೇಡಿ)” ಎಂದು ಚರಂಜಿತ್ ಸಿಂಗ್ ಚನ್ನಿ ಹೇಳಿದರು.
ಪಂಜಾಬ್ ನಲ್ಲಿ ರೈತರ ಪ್ರತಿಭಟನೆಯ ಕಾರಣ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿತ್ತು.
ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ, ಸಮಾವೇಶ ಉದ್ದೇಶಿಸಿ ಮಾತನಾಡಲು ಫಿರೋಜ್‌ಪುರಕ್ಕೆ ತೆರಳುತ್ತಿದ್ದಾಗ ರೈತರು ಅವರು ತೆರಳುತ್ತಿದ್ದ ಮಾರ್ಗವನ್ನು ತಡೆದರು. ಇದರಿಂದ ಪ್ರಧಾನಿ ಬೆಂಗಾವಲು ವಾಪಸ್ಸು ತೆರಳಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಮಾವೇಶ ರದ್ದುಪಡಿಸಲಾಗಿತ್ತು.
ಮೋದಿ ಭೇಟಿಯ ವೇಳೆ ಉಂಟಾದ ಭದ್ರತಾ ಲೋಪ ರಾಜಕೀಯ ವಿವಾದವಾಗಿ ಪರಿಣಮಿಸಿದೆ. ಇದೀಗ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಗುರುವಾರ ನಡೆದ ಕೋವಿಡ್ ಕುರಿತ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಚನ್ನಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.