ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮಕರಸಂಕ್ರಮಣ ಪೂಜೆಗೆ ಭಾರಿ ಸಂಖ್ಯೆಯ ಭಕ್ತಾದಿಗಳು ತಲುಪುವ ಸಾಧ್ಯತೆಯಿದೆ. ಭಕ್ತಾದಿಗಳ ನಿಯಂತ್ರಣಕ್ಕಾಗಿ ಪಂಪೆ, ಸನ್ನಿಧಾನದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಘುತ್ತಿದೆ. ಸನ್ನಿದಾಣದಲ್ಲಿ ಪ್ರಸಕ್ತ 440ಮಂದಿ ಪೊಲೀಸರು ಕರ್ತವ್ಯದಲ್ಲಿದ್ದು, ಈ ಸಂಖ್ಯೆಯನ್ನು 1200ಕ್ಕೇರಿಸಲು ತೀರ್ಮಾನಿಸಲಾಗಿದೆ. ಕೋವಿಡ್ ನಿಯಂತ್ರಣ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸರ ಸಂಖ್ಯೆಯಲ್ಲಿ ಕಡಿತವುಂಟಾಗಿತ್ತು.
ಮಕರಸಂಕ್ರಮಣ ದಿನವಾದ ಜ. 14ರಂದು ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಅಂದು ಮಧ್ಯಾಹ್ನ ನಂತರ ಪಂಪೆಯಿಂದ ಸನ್ನಿಧಾನಕ್ಕೆ ಹಾಗೂ ಹದಿನೆಂಟು ಮೆಟ್ಟಿಲೇರಲು ಭಕ್ತಾದಿಗಳಿಗೆ ನಿಯಂತ್ರಣ ಹೇರಲಾಗಿದೆ. ಮಧ್ಯಾಹ್ನ ಪೂಜೆಯ ನಂತರ ಗರ್ಭಗುಡಿ ಬಾಗಿಲು ಮುಚ್ಚಿದರೆ, ಪಂದಳ ಅರಮನೆಯಿಂದ ಪವಿತ್ರ ಆಭರಣ ಸನ್ನಿಧಾನಕ್ಕೆ ತಲುಪಿ, ಶ್ರೀ ಅಯ್ಯಪ್ಪನ ವಿಗ್ರಹಕ್ಕೆ ತೊಡಿಸಿದ ನಂತರ ದೀಪಾರಾಧನೆಯೊಂದಿಗೆ ಮಕರಜ್ಯೋತಿ ದರ್ಶನವಾಗುವ ವರೆಗೆ ನಿಯಂತ್ರಣ ಜಾರಿಯಲ್ಲಿರಲಿದೆ.
ಪವಿತ್ರಚಿನ್ನಾಭರಣದ ಶೋಭಾಯಾತ್ರೆ ವಲಿಯಾನವಟ್ಟದಿಂದ ನೀಲಿಮಲೆಗೆ ತಲುಪಿ ಅಪ್ಪಾಚಿಮೇಡು, ಮರಕೂಟ್ಟಂ, ಶರಂಗುತ್ತಿ ಮೂಲಕ ಸನ್ನಿಧಾಣ ತಲುಪಲಿದೆ. ಜ. 14ರಂದು ಎರುಮೇಲಿಯಿಂದ ಪಂಪೆಗೆ ವಾಹನ ಸಂಚಾರಕ್ಕೂ ನಿಯಂತ್ರಣವಿರಲಿದೆ. ಅಂದು ಮಧ್ಯಾಹ್ನ 12ರ ಒಳಗೆ ಪಂಪೆಗೆ ತಲುಪುವ ವಾಹನಗಳಿಗೆ ಮಾತ್ರ ಪ್ರವೇಶನುಮತಿ ಕಲ್ಪಿಸಲಾಗಿದೆ.