ಮುಂಬೈ: ಜನವರಿ ಮಧ್ಯದಲ್ಲಿ ದೆಹಲಿ, ಮುಂಬೈನಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೇರಬಹುದು ಎಂದು ಐಐಟಿ-ಕಾನ್ಪುರದ ಪ್ರಾಧ್ಯಾಪಕ ಮತ್ತು ಗಣಿತಶಾಸ್ತ್ರಜ್ಞ ಮನೀಂದ್ರ ಅಗರವಾಲ್ ಹೇಳಿದರು. ದೇಶದಲ್ಲಿ ಕೊರೊನಾ ಮೂರನೇ ಅಲೆ ಒಂದು ದಿನದಲ್ಲಿ 8 ಲಕ್ಷ ಪ್ರಕರಣಗಳವರೆಗೆ ಉಲ್ಬಣಗೊಳ್ಳಬಹುದು. ಇದು ಎರಡನೇ ಅಲೆಯ ಎರಡು ಪಟ್ಟು ಹೆಚ್ಚು ಎಂದು ಅಗರವಾಲ್ ಹೇಳಿದ್ದಾರೆ. ಈ ತಿಂಗಳ ಮಧ್ಯಭಾಗದಲ್ಲಿ ಮುಂಬೈ ಅಥವಾ ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಕೊರೊನಾ ತೀವ್ರ ಏರಿಕೆಯಾಗುವುದನ್ನ ಶೀಘ್ರದಲ್ಲೇ ಕಾಣಬಹುದು ಎಂದು ಪ್ರಸ್ತುತ ಲೆಕ್ಕಾಚಾರವನ್ನು ಆಧರಿಸಿ ಅಗರವಾಲ್ ಹೇಳಿದರು.
"ಮೂರನೇ ಅಲೆ (ದೇಶಕ್ಕೆ) ಮುಂದಿನ ತಿಂಗಳ ಆರಂಭದಲ್ಲಿ ಅಥವಾ ಸ್ವಲ್ಪ ಮುಂಚಿತವಾಗಿ ಉತ್ತುಂಗಕ್ಕೇರುವ ನಿರೀಕ್ಷೆಯಿದೆ. ಈಗಿನ ಪ್ರಕರಣಗಳನ್ನು ಆಧರಿಸಿದರೆ ಒಂದು ಅಂದಾಜಿನ ಪ್ರಕಾರ ನಾವು ದಿನಕ್ಕೆ ನಾಲ್ಕರಿಂದ ಎಂಟು ಲಕ್ಷ ಪ್ರಕರಣಗಳ ವ್ಯಾಪಕ ಏರಿಕೆಯನ್ನು ಊಹಿಸುತ್ತೇವೆ. ಭಾರತದಲ್ಲಿ ಈಗಷ್ಟೇ ಪ್ರಕರಣಗಳ ಸಂಖ್ಯೆ ಏರಲಾರಂಭಿಸಿದೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಇನ್ನೂ ಒಂದು ತಿಂಗಳು ಸಮಯ ಬೇಕು. ಮಾರ್ಚ್ ಮಧ್ಯದ ವೇಳೆಗೆ ಸಾಂಕ್ರಾಮಿಕ ರೋಗದ ಮೂರನೇ ಅಲೆ ಭಾರತದಲ್ಲಿ ಕಡಿಮೆ ಆಗಬಹುದು" ಎಂದು ಅಗರವಾಲ್ ಹೇಳಿದರು.ದಿ ಇಂಡಿಯನ್ ಎಕ್ಸ್‌ಪ್ರೆಸ್ ಐಡಿಯಾ ಎಕ್ಸ್‌ಚೇಂಜ್‌ನಲ್ಲಿ ಮಾತನಾಡುತ್ತಾ ಮನೀಂದ್ರ ಅಗರವಾಲ್, 'ದೇಶದಲ್ಲಿ ಕೋವಿಡ್ -19 ಏರಿಕೆಯನ್ನು ಪತ್ತೆಹಚ್ಚಲು ಕಂಪ್ಯೂಟರ್ ಡೇಟಾ ಮೇಲ್ವಿಚಾರಣೆ ಮಾಡುತ್ತಿರುವ ಅಗರವಾಲ್, ಚುನಾವಣೆಗಳು ಹೆಚ್ಚಿನ ಕೊರೊನಾ ಹರಡಲು ಕಾರಣವಾಗುತ್ತವೆ,' ಎಂದು ಹೇಳಿದರು.
ಬೇರೆ ಬೇರೆ ಕಾರಣಗಳಿಂದ ಸೋಂಕು ಹರಡುವ ಸಾಧ್ಯತೆ "ಚುನಾವಣಾ ರ್‍ಯಾಲಿಗಳು ಪ್ರಕರಣಗಳ ಉಲ್ಬಣಕ್ಕೆ ಕೊಡುಗೆ ನೀಡುವುದಿಲ್ಲ ಎಂದಲ್ಲ. ಇದರಿಂದ ಪ್ರಕರಣಗಳು ಹೆಚ್ಚಾಗುತ್ತವೆ. ಆದರೆ ಕೇವಲ ಚುನಾವಣೆಗಳು ಮಾತ್ರವಲ್ಲ ಬೇರೆ ಬೇರೆ ಕಾರಣಗಳಿಂದ ಸೋಂಕು ಹರಡುವ ಸಾಧ್ಯತೆ ಇದೆ. ಚುನಾವಣೆ ರಾಜ್ಯದಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಒಂದು ಕಾರಣವಾಗಿದೆ. ನಾವು ಗಮನಿಸಿದ ಸಂಗತಿಯೆಂದರೆ ನಮಗೆ ಆಶ್ಚರ್ಯವಾಗುವಂತೆ ವಿಚಾರ ಹೊರಹೊಮ್ಮಿದೆ. ಈ ಹಿಂದೆ ಚುನಾವಣೆಯಿಂದ ರಾಜ್ಯದ ಒಟ್ಟಾರೆ ಪರಿಸ್ಥಿತಿಯು ಹೆಚ್ಚು ಬದಲಾಗಿಲ್ಲ," ಎಂದರು.
ಐದು ರಾಜ್ಯಗಳ ಚುನಾವಣಾ ಅಧಿಸೂಚನೆಯಲ್ಲಿ ಜನವರಿ 15 ರವರೆಗೆ ರೋಡ್‌ಶೋ ಮತ್ತು ಭೌತಿಕ ರ್‍ಯಾಲಿಗಳನ್ನು ಸ್ಥಗಿತಗೊಳಿಸಿದ ವಿಚಾರದಲ್ಲಿ ಅವರ ಹೇಳಿಕೆಗಳು ಮಹತ್ವದ್ದಾಗಿವೆ. ಅಗರವಾಲ್ ಅವರು 16 ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿಯ ಕುರಿತು ಕಳೆದ ವರ್ಷ ನಡೆಸಿದ ವಿಶ್ಲೇಷಣೆಯನ್ನು ಆಧರಿಸಿ ಚುನಾವಣೆಗಳ ಪ್ರಭಾವದ ಕುರಿತು ಹೇಳಿಕೆ ನೀಡಿದ್ದಾರೆ. ಇದರಲ್ಲಿ ಐದು ರಾಜ್ಯಗಳು ಎರಡನೇ ಅಲೆಗೆ ಸ್ವಲ್ಪ ಮುಂಚಿತವಾಗಿ ಚುನಾವಣೆಗೆ ಹೋಗಿದ್ದವು. "ಈ ಪ್ರತಿಯೊಂದು ರಾಜ್ಯಗಳಲ್ಲಿ ನಾವು ಎರಡನೇ ಅಲೆ ಪಥವನ್ನು ನಿಯಂತ್ರಿಸುವ ನಿಯತಾಂಕಗಳನ್ನು ಲೆಕ್ಕ ಹಾಕಿದ್ದೇವೆ. ನಾವು ಗಣನೆಗೆ ತೆಗೆದುಕೊಂಡ ಐದು ನಿಯತಾಂಕಗಳಿವೆ. ಇದರಲ್ಲಿ ಪ್ರತಿಯೊಂದು ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗವು ಎಷ್ಟು ವೇಗವಾಗಿ ಹರಡುತ್ತದೆ ಎಂಬುದನ್ನು ಮೂಲತಃ ನಿರ್ಧರಿಸಲಾಗುತ್ತದೆ. ನಾವು 16 ರಾಜ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದೇವೆ. ಚುನಾವಣೆ ನಡೆಯುವ ಐದು ರಾಜ್ಯಗಳು ಮತ್ತು ಇನ್ನುಳಿದ 11 ರಾಜ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಮೇಲ್ವಿಚಾರಣೆ ಮಾಡಲಾಯಿತು. ಈ ಎರಡು ಗುಂಪುಗಳಲ್ಲಿ ವ್ಯತ್ಯಾಸವಿದೆಯೇ ಎಂದು ನಾವು ಲೆಕ್ಕಾಚಾರ ಮಾಡಿದ್ದೇವೆ. ಸರಿಯಾದ ಅಂಕಿಅಂಶ ಪ್ರಯೋಗಗಳನ್ನು ನಡೆಸಿದ್ದೇವೆ. ಸಂಖ್ಯಾಶಾಸ್ತ್ರೀಯವಾಗಿ ಎರಡು ಗುಂಪುಗಳ (ರಾಜ್ಯಗಳ) ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇದರರ್ಥ ಐದು ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗ ಹರಡುವಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸಲಿಲ್ಲ ಎಂದು ಸೂಚಿಸುತ್ತದೆ" ಅಗರವಾಲ್ ಹೇಳಿದರು. "ನಮ್ಮ ಅಧ್ಯಯನದ ಸಂಶೋಧನೆಗಳನ್ನು ನಾವು ಇನ್ನೂ ಪ್ರಕಟಿಸಿಲ್ಲ, ಆದರೆ ನಾವು ಅದನ್ನು ಮೊಂದಿನ ದಿನಗಳಲ್ಲಿ ಪ್ರಕಟಿಸಲು ಉದ್ದೇಶಿಸಿದ್ದೇವೆ" ಎಂದು ಅವರು ಹೇಳಿದರು. ಪ್ರಸ್ತುತ ಉಲ್ಬಣದ ಬಗ್ಗೆ ಕೇಳಿದಾಗ ಅವರು, "ಪ್ಯಾರಾಮೀಟರ್‌ಗಳು ಪ್ರಸ್ತುತ ಇರುವಷ್ಟು ವೇಗವಾಗಿ ಬದಲಾಗುತ್ತಿರುವಾಗ ಪ್ರೊಜೆಕ್ಷನ್‌ಗಳನ್ನು ಮಾಡುವುದು ಕಷ್ಟ. ಆದರೆ ನಾನು ತುಲನಾತ್ಮಕವಾಗಿ ಖಚಿತವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಮುಂಬೈಗೆ, ಮೂರನೇ ಅಲೆಯು ಈ ತಿಂಗಳ ಮಧ್ಯಭಾಗದಲ್ಲಿ ಉತ್ತುಂಗಕ್ಕೇರುವ ಸಾಧ್ಯತೆಯಿದೆ. ಹಾಗಾಗಿ ಅದು ತುಂಬಾ ದೂರವಿಲ್ಲ. ದೆಹಲಿಯ ವಿಷಯದಲ್ಲೂ ಅದೇ ರೀತಿಯಾಗಿದೆ. ಕೋಲ್ಕತ್ತಾದಲ್ಲೂ ಪ್ರಕರಣಗಳು ಹೆಚ್ಚಾಗಬಹುದು" ಎಂದಿದ್ದಾರೆ. ಒಟ್ಟಾರೆಯಾಗಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಫೆಬ್ರವರಿಯಲ್ಲಿ ಉತ್ತುಂಗದಲ್ಲಿರುತ್ತದೆ ಎಂದು ಅಗರವಾಲ್ ಹೇಳಿದರು.