ಕಾಸರಗೋಡು: ಬದರೀನಾಥದಿಂದ ಶಬರಿಮಲೆಯವರೆಗೆ ಪಾದಯಾತ್ರೆ ಕೈಗೊಂಡಿರುವ ಕಾಸರಗೋಡು ಜಿಲ್ಲೆಯ ಮೂವರು ವ್ರತಧಾರಿಗಳು 130 ದಿವಸಗಳ ನಂತರ ಎರುಮೇಲಿಗೆ ತಲುಪಿದ್ದು, ಇವರಿಗೆ ಮಿಜೋರಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ನೇತೃತ್ವದಲ್ಲಿ ಬುಧವಾರ ಸ್ವಾಗತ ನೀಡಲಾಯಿತು.
ಕೂಡ್ಲು ಶ್ರೀ ವಿಷ್ಣುಮಂಗಲ ದೇವಸ್ಥಾನ ಸಮೀಪದ ಸನತ್ ಕುಮಾರ್ ನಾಯಕ್, ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನ ಮಂದಿರ ಬಳಿಯ ಪ್ರಶಾಂತ್ ಮತ್ತು ಕೂಡ್ಲು ಮೀಪುಗುರಿಯ ಸಂಪತ್ ಕುಮಾರ್ ಶೆಟ್ಟಿ ಎಂಬವರು ಜುಲೈ 31ರಂದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾಲೆ ಧರಿಸಿ ಆಗಸ್ಟ್ 27ರಂದು ಕಾಸರಗೋಡಿನಿಂದ ರೈಲಿನ ಮೂಲಕ ಋಷಿಕೇಶಕ್ಕೆ ತೆರಳಿ ಅಲ್ಲಿಂದ ರಸ್ತೆ ಮೂಲಕ ಸೆಪ್ಟೆಂಬರ್ 1ರಂದು ಬದರೀನಾಥ್ ತಲುಪಿದ್ದರು. ದಿನಕ್ಕೆ ಸರಾಸರಿ 30 ಕಿ.ಮೀ. ದೂರವನ್ನು ಸ್ವಾಮಿ ಶರಣಂ ಉದ್ಘೋಷದೊಂದಿಗೆ ಕ್ರಮಿಸಿ ಎರುಮೇಲಿ ತಲುಪಿದ್ದಾರೆ.
ಎರುಮೇಲಿಯಿಂದ ಪಾರಂಪರಿಕ ಕಾನನ ಹಾದಿ ಮೂಲಕ ಅಳುದೆ. ಪಂಪೆ ಮೂಲಕ ಸನ್ನಿಧಾನ ತಲುಪಲಿದ್ದೇವೆ. ಮಕರಜ್ಯೋತಿ ದರ್ಶನದೊಂದಿಗೆ ವಾಪಸಾಗಲಿರುವುದಾಗಿ ವ್ರತಧಾರಿ ಸನತ್ ಕುಮಾರ್ ನಾಯಕ್ ತಿಳಿಸಿದ್ದಾರೆ.