ಕುಂಬಳೆ: ಬಡ ಅನಾಥ ವಿದ್ಯಾರ್ಥಿಗಳ ಸೇವೆಯನ್ನು ಮಾಡುವ ಮೂಲಕ ಟಿ.ನಾರಾಯಣ ಭಟ್ ಹಾಗೂ ಪ್ರಭಾವತಿ ದಂಪತಿಗಳು ಜೀವನದಲ್ಲಿ ಆನಂದವನ್ನು ಕಾಣುತ್ತಿದ್ದಾರೆ. ಅಧ್ಯಾಪಕ ವೃತ್ತಿಯಲ್ಲಿರುವಾಗಲೂ ನಂತರವೂ ಇವರ ನಿರಂತರ ಚಟುವಟಿಗಳು ಇತರರಿಗೆ ಪ್ರೇರಣಾದಾಯಕವಾಗಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಅಭಿಪ್ರಾಯಪಟ್ಟರು.
ಮಂಗಳವಾರ ಸೂರಂಬೈಲಿನಲ್ಲಿರುವ ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಸಭಾ ಭವನದಲ್ಲಿ ನಡೆದ ಕೇರಳ ರಾಜ್ಯ ಪೆನ್ಶನರ್ಸ್ ಸಂಘ್ ಕಾಸರಗೋಡು ಜಿಲ್ಲಾ ಸಮ್ಮೇಳನದ ಸಂದರ್ಭದಲ್ಲಿ ಸಮಾಜಸೇವೆಗೋಸ್ಕರ ಸನ್ಮಾನಿತರಾದ ಟಿ.ನಾರಾಯಣ ಭಟ್ ಹಾಗೂ ಪ್ರಭಾವತಿ ದಂಪತಿಗಳ ಕುರಿತು ಅವರು ಮಾತನಾಡಿದರು.
ಸಮಯಪರಿಪಾಲನೆ, ಶ್ರದ್ಧೆ, ನಿಷ್ಠೆಯಿಂದ ಮಾಡಿದ ಸಾಮಾಜಿಕ ಕಾರ್ಯವು ಅವರಿಗೆ ಗೌರವನ್ನು ತಂದುಕೊಟ್ಟಿದೆ ಎಂದು ತಿಳಿಸುತ್ತಾ ಅವರ ಚಟುವಟಿಕೆಗಳ ಚಿತ್ರಣವನ್ನು ತೆರೆದಿಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನಾ ಸಮಿತಿಯ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕೆಎಸ್‍ಪಿ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ, ಕೆಎಸ್‍ಪಿ ಸಂಘದ ರಾಜ್ಯ ಉಪಾಧ್ಯಕ್ಷ ಈಶ್ವರ ರಾವ್, ಎನ್.ಜಿ.ಒ. ಸಂಘದ ಕಾರ್ಯದರ್ಶಿ ರತೀಶ್ ಕೃಷ್ಣನ್, ಎನ್.ಟಿ.ಯು. ಕೇರಳ ರಾಜ್ಯ ಕಾರ್ಯದರ್ಶಿ ಪ್ರಭಾಕರನ್ ನಾಯರ್, ಕೆಎಸ್‍ಪಿಎಸ್ ಕಾಸರಗೋಡು ಜಿಲ್ಲಾ ಖಚಾಂಜಿ ಕೆ.ಕೇಶವ ಪ್ರಸಾದ, ಕಾರ್ಯದರ್ಶಿ ಅರವಿಂದ ಕುಮಾರ್ ಎನ್.ಕೆ. ಜೊತೆಗಿದ್ದರು.