ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮುಸ್ಲಿಂ ಮಹಿಳೆಯರ ಸಾಧನೆಗಳನ್ನು ಗುರುತಿಸುವ ರೈಸಿಂಗ್ ಬಿಯಾಂಡ್ ದಿ ಸೀಲಿಂಗ್ (RBTC) ಸಂಸ್ಥೆಯು ಬಿಡುಗಡೆ ಮಾಡಿರುವ 70 ಮುಸ್ಲಿಂ ಸಾಧಕಿಯರ ಪಟ್ಟಿಯಲ್ಲಿ ಶಬಾನ ಫೈಸಲ್, ಸಾರಾ ಅಬೂಬಕರ್, ನಗ್ಮಾ ಮೊಹಮ್ಮದ್ ಮಲಿಕ್ ಮತ್ತಿತರು ಸ್ಥಾನ ಪಡೆದಿದ್ದಾರೆ.
ರಾಜಕೀಯ, ಶೈಕ್ಷಣಿಕ, ಕ್ರೀಡೆ, ಆಡಳಿತ, ಮಾಧ್ಯಮ, ಕಲೆ, ಉದ್ಯಮ, ಸಾಹಿತ್ಯ, ಹೋರಾಟ ಮೊದಲಾದವುಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಲಾಗಿದ್ದು, ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್, ಮಳೆಯಾಲಂ ನಟಿ-ನಿರ್ಮಾಪಕಿ ನಝ್ರಿಯಾ ನಾಝಿಂ, ಇಂಡಿಯನ್ ಫಾರಿನ್ ಸರ್ವಿಸ್ ಗೆ ಆಯ್ಕೆಯಾದ ಪ್ರಥಮ ಮುಸ್ಲಿಂ ಮಹಿಳೆ ನಗ್ಮಾ ಮುಹಮ್ಮದ್ ಮಾಲಿಕ್, ಸಿಎಎ ಹೋರಾಟದ ಸಂಧರ್ಭದಲ್ಲಿ ಗಮನ ಸೆಳೆದಿದ್ದ ಆಯೆಷಾ ರೆನ್ನಾ, ಮಲಯಾಳಂ ನ ಉದಯೋನ್ಮುಖ ಗಾಯಕಿ ದಾನಾ ರಾಝಿಕ್, ಯೂಟ್ಯೂಬ್ ನಲ್ಲಿ ಇಸ್ಲಾಮಿಕ್ ಹಾಡುಗಳ ಮೂಲಕ ೨ ಮಿಲಿಯನ್ ಗೂ ಹೆಚ್ಚಿನ ಚಂದಾದಾರನ್ನು ಹೊಂದಿರುವ ಆಯಿಶಾ ಅಬ್ದುಲ್ ಬಾಸಿತ್, ಲಕ್ಷದ್ವೀಪದ ಸಿನಿಮಾ ನಿರ್ಮಾಪಕಿ ಆಯಿಶಾ ಸುಲ್ತಾನಾ, ಕಣ್ಣೂರಿನ ಪ್ರಥಮ ಮುಸ್ಲಿಂ ಮೇಯರ್ ಸಿ. ಝೀನತ್, ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರೆ ಶಮಾ ಮುಹಮ್ಮದ್, ಬಾಡಿಬಿಲ್ಡರ್ ಮತ್ತು ಪವರ್ ಲಿಫ್ಟರ್ ಮಜೀಝಿಯಾ ಬಾನು, ಉದ್ಯಮಿ ಶಬಾನಾ ಫೈಸಲ್, ಹಾಡುಗಾರ್ತಿ ನೂರ್ ಜಲೀಲಾ, ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿದ್ದ ಫಾತಿಮಾ ಬೀವಿ, ಪವರ್ ಲಿಫ್ಟರ್ ಸಕಿಯಾ ಖಾತುನ್ ಸೇರಿದಂತೆ ಒಟ್ಟು 70 ಮಂದಿ ಸಾಧಕ ಮುಸ್ಲಿಂ ಮಹಿಳೆಯರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
RBTC ಪಟ್ಟಿಯಲ್ಲಿ ಈಗಾಗಲೇ ಕರ್ನಾಟಕ, ಕೇರಳ ಸೇರಿದಂತೆ 14 ರಾಜ್ಯಗಳ ಮುಸ್ಲಿಂ ಸಾಧಕಿಯರನ್ನು ಪಟ್ಟಿ ಮಾಡಲಾಗಿದ್ದು, ಭಾರತದ ಎಲ್ಲಾ ಯುವತಿಯರು ಮತ್ತು ಹುಡುಗಿಯರು ಹಾಗೂ ಭವಿಷ್ಯದ ಪೀಳಿಗೆಗೆ ತಮ್ಮ ಸ್ವಂತ ಜಿಲ್ಲೆ ಮತ್ತು ನೆರೆಹೊರೆಗಳಲ್ಲಿ ತಮ್ಮ ಸ್ಫೂರ್ತಿ, ಆದರ್ಶ ಮತ್ತು ಮಾರ್ಗದರ್ಶಕರನ್ನು ಹುಡುಕಲು ಸಹಾಯವಾಗುತ್ತದೆ ಎಂದು ಫರಾಹ್ ಉಸ್ಮಾನಿ ಸಂಪಾದಕರ ಟಿಪ್ಪಣಿಯಲ್ಲಿ ಬರೆದಿದ್ದಾರೆ.
ಕೆಇಎಫ್ ಹೋಲ್ಡಿಂಗ್ಸ್‌ನ ಉಪಾಧ್ಯಕ್ಷೆಯಾಗಿರುವ ಮಂಗಳೂರು ಮೂಲದ ಶಬಾನಾ ಫೈಝಲ್ ಅವರು ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಇವರು ದಿವಂಗತ ತುಂಬೆ ಬಿ.ಎ ಅಹ್ಮದ್ ಹಾಜಿಯವರ ಪುತ್ರಿ.
ಕೆಇಎಫ್ ಹೋಲ್ಡಿಂಗ್ಸ್ ಯುಎಇ-ಮೂಲದ ಬಹುರಾಷ್ಟ್ರೀಯ ವೈವಿಧ್ಯಮಯ ಸಮೂಹವಾಗಿದ್ದು, ನವೀನ ಆಫ್‌ಸೈಟ್ ನಿರ್ಮಾಣ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದೆ. ಶಬಾನಾ ಅವರು 1995 ರಲ್ಲಿ ತಮ್ಮ ಉದ್ಯಮಶೀಲ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅವರು KEF ಹೋಲ್ಡಿಂಗ್ಸ್‌ನ ಅಧ್ಯಕ್ಷರಾದ ಫೈಝಲ್ ಇ ಕೊಟ್ಟಿಕೊಲ್ಲನ್ ಅವರನ್ನು ವಿವಾಹವಾದ ನಂತರ ಕ್ಯಾಲಿಕಟ್‌ನಲ್ಲಿ ಸೋಫಿಯಾಸ್ ವರ್ಲ್ಡ್ (ಐಷಾರಾಮಿ ಮತ್ತು ವಿಶೇಷ ವಸ್ತುಗಳ ಸ್ಟುಡಿಯೋ) ವನ್ನು ಸ್ಥಾಪಿಸಿದರು.
ಮುಸ್ಲಿಂ ಮಹಿಳೆಯರ ಕುರಿತು ಇರುವ ರೂಢಿಗತ ನಕರಾತ್ಮಕ ಅಭಿಪ್ರಾಯಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ Rising Beyond The Ceiling (RBTC) ಹುಟ್ಟಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮುಸ್ಲಿಂ ಮಹಿಳೆಯರನ್ನು ಗುರುತಿಸಿ, ಅವರ ಕೊಡುಗೆಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವುದು ಕೂಡ ಇದರ ಧ್ಯೇಯವಾಗಿದೆ.
2020 ರ ಎಪ್ರಿಲ್ ನಲ್ಲಿ ಡಾ. ಫರಾಹ್ ಕೆ ಉಸ್ಮಾನಿ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಭವಿಷ್ಯದ ಪೀಳಿಗೆಗೆ ಹಾಗೂ ಯುವ ತಲೆಮಾರಿನ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಹೆಚ್ಚು ಹೆಚ್ಚು ಮುಸ್ಲಿಂ ಮಹಿಳೆಯರ ಸಾಧನೆಗಳನ್ನು ಪರಿಚಯಿಸುವಲ್ಲಿ ಶ್ರಮಿಸುವುದಾಗಿ RBTC ಹೇಳಿಕೊಂಡಿದೆ.
ಸಂಪೂರ್ಣ ಪಟ್ಟಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಬಹುದಾಗಿದೆ.
https://www.inspiringindianmuslimwomen.org/inspirations-from-states/kerala