ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ನಿರ್ಮಾಣ ಕಾಮಗಾರಿ ಕೇರಳದಲ್ಲಿ ಕೊನೆಗೂ ಆರಂಭಗೊಂಡಿದೆ. ಮೊದಲ ರೀಚ್ ಅನ್ವಯ ತಲಪ್ಪಾಡಿಯಿಂದ ಚೆರ್ಕಳ ವರೆಗಿನ 39ಕಿ.ಮೀ ಕಾಮಗಾರಿ ಆರಂಭಿಸಲಾಗಿದ್ದು, ಕಾಸರಗೋಡು ನಗರದಲ್ಲಿ ಪ್ರಮುಖ ಫ್ಲೈಓವರ್ ತಲೆಯೆತ್ತಲಿದೆ.
ಊರಾಲುಂಗಾಲ್ ಸಂಸ್ಥೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು, 1704.15ಕೋಟಿ ಮೊತ್ತಕ್ಕೆ ಬಿಡ್ ಸಂಸ್ಥೆ ಪಾಲಾಗಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ತಿಗೊಳ್ಳಲಿದ್ದು, 15ವರ್ಷಗಳ ಕಾಲ ಹೆದ್ದಾರಿಯ ನಿರ್ವಹಣೆ ಸಂಸ್ಥೆಗಿರಲಿದೆ. ಒಟ್ಟು ಒಂಬತ್ತು ಅಂಡರ್ ಪಾಸ್‍ಗಳು, ಒಂದು ಬೃಃತ್ ಫ್ಲೈಓವರ್, ನಾಲ್ಕು ಮುಖ್ಯ ಸೇತುವೆಗಳು, ಒಂದು ಟ್ರಕ್ ಲೇಬೈ, ಮೂರು ಫೂಟ್ ಓವರ್‍ಬ್ರಿಜ್ ನಿರ್ಮಾಣಗೊಳ್ಳಲಿದೆ.
ಕರಂದಕ್ಕಾಡಿನಿಂದ ಹೊಸಬಸ್ ನಿಲ್ದಾಣ ಸನಿಹದ ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ಮಂದಿರದ ವರೆಗೆ 1.2ಕಿ.ಮೀ ಉದ್ದದ ಫ್ಲೈಓವರ್ ನಿರ್ಮಾಣಗೊಳ್ಳಲಿದೆ. ಇದರ ಮೇಲ್ಭಾಗದಲ್ಲಿ ಆರು ಹಾಗೂ ತಳ ಭಾಗದಲ್ಲಿ ನಾಲ್ಕು ರಸ್ತೆಗಳ ನಿರ್ಮಾಣವಾಗಲಿದೆ. ಒಟ್ಟು 30ಪಿಲ್ಲರ್‍ಗಳು ನಿರ್ಮಾಣಗೊಳ್ಳಲಿದೆ. ಫ್ಲೈಓವರ್ ಕಾಂಗಾರಿ ವೇಳೆ ವಾಹನಗಳಿಗೆ ಯಾವುದೇ ತಡೆಯಿಲ್ಲದೆ ಸಂಚರಿಸುವ ರೀತಿಯಲ್ಲಿ ಎರಡೂ ಬದಿ ಅನುಬಂಧಿತ ರಸ್ತೆಗಳ ನಿರ್ಮಾಣಕಾರ್ಯವೂ ಪ್ರಗತಿಯಲ್ಲಿದೆ. ಈಗಾಗಲೇ ರಸ್ತೆ ಬದಿಯ ಬೃಹತ್ ಮರಗಳು, ಕಟ್ಟಡಗಳನ್ನು ಕೆಡವಿಹಾಕಲಾಗಿದ್ದು, ರಸ್ತೆ ನಿರ್ಮಾಣಕ್ಕಿರುವ ಎಲ್ಲ ಅಡೆತಡೆಗಳನ್ನೂ ನಿವಾರಿಸಿರುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ.