ಮುಂಬೈ: ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಲಿದೆ.
ದಕ್ಷಿಣ ಮುಂಬೈಯಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ವಾಟರ್ ಟ್ಯಾಕ್ಸಿ ಸೇವೆ ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ.
ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆಎನ್‌ಪಿಟಿಗೆ ದಕ್ಷಿಣ ಮುಂಬೈನ ಮಜಗಾನ್‌ನಲ್ಲಿರುವ ಕ್ರೂಸರ್ ಟರ್ಮಿನಲ್‌ನೊಂದಿಗೆ ಸಂಪರ್ಕ ವನ್ನು ಈ ವಾಟರ್ ಟ್ಯಾಕ್ಸಿಗಳು ಕಲ್ಪಿಸಲಿದ್ದು, ಪ್ರಯಾಣಿಕರಿಗೆ ಸುಮಾರು 25 ನಿಮಿಷ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಾಟರ್ ಟ್ಯಾಕ್ಸಿಯಲ್ಲಿ ಏಕಮುಖ ಪ್ರಯಾಣದ ವೆಚ್ಚ ರೂ 200 ರಿಂದ ರೂ 700 ರ ನಡುವೆ ಇರಲಿದೆ. ಇದಲ್ಲದೇ ಮಾಸಿಕ ಪಾಸ್‌ಗಳ ವ್ಯವಸ್ಥೆಯು ಇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳಾಂತ್ಯದೊಳಗೆ ಈ ವಾಟರ್ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಲಿದ್ದಾರೆ.
ವಾಟರ್ ಟ್ಯಾಕ್ಸಿಗಳು ಸಂಚರಿಸುವ ಮಾರ್ಗಗಳು:
ಎಲಿಫೆಂಟಾದಿಂದ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ) ನಿಂದ ರೇವಾಸ್, ಧರ್ಮತಾರ್, ಕರಂಜಾಡೆ, ಬೇಲಾಪುರ್, ನೆರೂಲ್, ಐರೋಲಿ, ವಾಶಿ, ಖಂಡೇರಿ ದ್ವೀಪಗಳು ಮತ್ತು ಜವಾಹರಲಾಲ್ ನೆಹರು ಬಂದರಿಗೆ ದೇಶೀಯ ಕ್ರೂಸ್ ಟರ್ಮಿನಲ್ಗಳನ್ನು ವಾಟರ್ ಟ್ಯಾಕ್ಸಿ ಮಾರ್ಗ ಒಳಗೊಂಡಿದೆ.
ವಾಟರ್ ಟ್ಯಾಕ್ಸಿ ಸೇವೆ ಜಾರಿಗೊಳ್ಳುವುದರಿಂದ ಮುಂಬೈ ನ ಸಾರ್ವಜನಿಕ ರೈಲುಗಳ ಲೋಡ್ ಕಡಿಮೆಯಾಗಲಿದ್ದು, ಹೊಸ ಸೇವೆ ಆರಂಭವಾದ ಬಳಿಕ ಸ್ಥಳೀಯ ರೈಲುಗಳ ಹೊರೆ ಕಡಿಮೆಯಾಗಲಿದೆ ಎಂದು ಸೇವೆಗಳನ್ನು ಒದಗಿಸಲಿರುವ ಇನ್ಫಿನಿಟಿ ಹಾರ್ಬರ್ ಕಂಪನಿ ತಿಳಿಸಿದೆ. ಅಲ್ಲದೆ, ಈ ಸೇವೆಯು ಎಲ್ಲಾ ಹವಾಮಾನದಲ್ಲೂ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ, ಮುಂಬೈ ಮತ್ತು ನವಿ ಮುಂಬೈ ನಡುವೆ ರಸ್ತೆ ಮತ್ತು ರೈಲು ಮಾತ್ರ ಸಾರಿಗೆ ವಿಧಾನವಾಗಿದೆ. ವಾಟರ್ ಟ್ಯಾಕ್ಸಿಗಳು ಸುಮಾರು 30 ಕಿ.ಮೀ ದೂರದ ಪ್ರಯಾಣವನ್ನು ಕಡಿಮೆ ಮಾಡಲು ಇದು 2,5 ನಿಮಿಷಗಳನ್ನು ತೆಗೆದುಕೊಳ್ಳಲಿದೆ.
ಒಂದು ಬಾರಿಗೆ 50 ಜನರು ಪ್ರಯಾಣಿಸಲು ಸಾಧ್ಯವಾಗುವ ಈ ವಾಟರ್ ಟ್ಯಾಕ್ಸಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಇದರಲ್ಲಿ ಸುರಕ್ಷತೆಗೂ ವಿಶೇಷ ಗಮನ ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಲೈಫ್ ಜಾಕೆಟ್ ನೀಡಲಾಗುವುದು. ಈ ವಾಟರ್ ಟ್ಯಾಕ್ಸಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಮತ್ತು ಈ ವಾಟರ್ ಟ್ಯಾಕ್ಸಿ ಹಡಗಿನಲ್ಲಿ ಯಾವಾಗಲೂ ಭದ್ರತಾ ಸಿಬ್ಬಂದಿ ಇರಲಿದ್ದಾರೆ.