ಮುಳ್ಳೇರಿಯ: ಕಾಸರಗೋಡು ಜಿಲ್ಲೆಯ ಬಹುಮುಖ ಪ್ರತಿಭೆಗಳಾದ ಆದ್ಯಂತ್ ಅಡೂರು ಹಾಗೂ ಬದಿಯಡ್ಕದ ಚಿತ್ತರಂಜನ್ ಕಡಂದೇಲು ಅವರಿಗೆ 2022ರ ಸಾಲಿನ ಆದಿಗ್ರಾಮೋತ್ಸವ ಬಾಲಸಿರಿ ಪುರಸ್ಕಾರ ದೊರೆತಿದೆ. ಜ.25ರಂದು ಕಾರ್ಕಳ ತಾಲ್ಲೂಕಿನ ಅಜೆಕಾರು ಕುರ್ಪಾಡಿ ಪುರಾತನ ಬೊಬ್ಬರ್ಯ ಸ್ಥಾನದ ಪರಿಸರದಲ್ಲಿ ನಡೆದ ಆದಿಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈ ಪ್ರತಿಭೆಗಳನ್ನು ಪ್ರಶಸ್ತಿಪತ್ರ, ಸ್ಮರಣಿಗೆ ಹಾಗೂ ಪದಕ ನೀಡಿ ಗೌರವಿಸಿದರು.
ಆದ್ಯಂತ್ ಅಡೂರು ಅವರು ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಹಾಗೂ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು- ಜಯಲಕ್ಷ್ಮಿ ದಂಪತಿಯ ಪುತ್ರ. ಚಿತ್ತರಂಜನ್ ಕಡಂದೇಲು ಅವರು ಬದಿಯಡ್ಕದ ನವಜೀವನ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಹಾಗೂ ಹರೀಶ್ ಕುಮಾರ್ ಕಡಂದೇಲು ಹಾಗೂ ಜ್ಯೋತ್ಸ್ನಾ ಟೀಚರ್ ದಂಪತಿಯ ಪುತ್ರ. ಕಾರ್ಯಕ್ರಮದಲ್ಲಿ ವಿಶ್ವ ಸಂಸ್ಕøತಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಜೆಕಾರು ಸೆಕ್ರೇಡ್ ಹಾರ್ಟ್ ಅಫ್ ಜೀಸಸ್ ಚರ್ಚ್ ಧರ್ಮಗುರುಗಳಾದ ವಂ. ಪ್ರವೀಣ್ ಅಮೃತ್ ಮಾರ್ಟಿಸ್, ವಿಶ್ರಾಂತ ಐಎಫ್‍ಎಸ್ ಅಧಿಕಾರಿ ಕೆ ವಿ ಲಕ್ಷ್ಮಣ ಮೂರ್ತಿ, ಖ್ಯಾತ ಚಿತ್ರ ಕಲಾವಿದರಾದ ಡಾ. ಉಪಾಧ್ಯಾಯ ಮೂಡುಬೆಳ್ಳೆ, ಬಿ ಕೆ ಮಾಧವ ರಾವ್ ಮಂಗಳೂರು, ಹಾಸ್ಯ ಸಾಹಿತಿ ಉಡುಪಿಯ ಸೋಮೇಶ್ವರ ಸಂಧ್ಯಾ ಶೆಣೈ, ಸಾಮಾಜಿಕ ಮುಖಂಡ ಸಾಣೂರು ಅರುಣ್ ಶೆಟ್ಟಿಗಾರ್, ಪತ್ರಕರ್ತ ಶೇಖರ ಅಜೆಕಾರು, ಉದ್ಯಮಿ ಕೆ. ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ ಮೊದಲಾದವರು ಭಾಗವಹಿಸಿದ್ದರು.