ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಹಿನ್ನಲೆಯಲ್ಲಿ ಯಾವುದೇ ನಿಯಂತ್ರಣಗಳನ್ನು ಹೇರುವ ಯೋಚನೆ ಈಗಿಲ್ಲ. ಜೊತೆಗೆ ರಾತ್ರಿ ಕಫ್ರ್ಯೂ ವಿಧಿಸುವುದಿಲ್ಲ ಮತ್ತು ಈಗಿರುವ ನಿರ್ಬಂಧಗಳನ್ನು ಬಿಗಿಗೊಳಿಸುವ ಅಗತ್ಯವಿಲ್ಲ ಎಂದು ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಯಿತು. ಎಲ್ಲರೂ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸರ್ಕಾರ ಸೂಚಿಸಿದೆ.
ಅಸ್ತಿತ್ವದಲ್ಲಿರುವ ನಿರ್ಬಂಧಗಳು ಮುಂದುವರಿಯುತ್ತವೆ. ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ. ಮುಂದಿನ ಪರಿಶೀಲನಾ ಸಭೆಯಲ್ಲಿ ಹೆಚ್ಚಿನ ನಿರ್ಬಂಧಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಮತ್ತು ಶೀಘ್ರದಲ್ಲೇ ಇತರ ನಿರ್ಧಾರಗಳನ್ನು ಪ್ರಕಟಿಸಲಾಗುವುದು ಎಂದು ಸರ್ಕಾರ ಹೇಳಿದೆ. ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಭೆ ನಿರ್ಧರಿಸಿದೆ.
ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣ ಕ್ರಮ ಬಿಗಿಗೊಳಿಸಲಾಗುವುದು. ಕಚೇರಿಗಳ ಕೆಲಸವನ್ನು ಸಾಧ್ಯವಾದಷ್ಟು ಆನ್‍ಲೈನ್‍ನಲ್ಲಿ ಮಾಡಲು ಸಹ ಉದ್ದೇಶಿಸಲಾಗಿದೆ. ವಿವಾಹ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಸರ್ಕಾರ 50 ಕ್ಕೆ ಇಳಿಕೆಮಾಡಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಯಿತು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವರು ಮತ್ತಿತರರು ಉಪಸ್ಥಿತರಿದ್ದರು. ಮೂರನೇ ಹಂತದ ವ್ಯಾಕ್ಸಿನೇಷನ್ ಪ್ರಾರಂಭವಾದ ನಂತರ ವೈರಸ್ ಹರಡುವುದು ನಿಯಂತ್ರಣಕ್ಕೆ ಬರುವುದೆಂದು ಸರ್ಕಾರ ಹೇಳಿದೆ.