ನವದೆಹಲಿ: ವಿವಿಧ ರಾಜ್ಯಗಳಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಜತೆಗೆ ಕರೊನಾ ಕೇಸುಗಳು ಹೆಚ್ಚುತ್ತಿದ್ದರೂ ಅತಿ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಚುನಾವಣೆ ನಿಗದಿಯಂತೆ ನಡೆಯಲಿದ್ದು, ಮುಂದೂಡುವ ಉದ್ದೇಶ ನಮ್ಮಲ್ಲಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಮುಂದೂಡುವುದಕ್ಕೆ ರಾಜಕೀಯ ಪಕ್ಷಗಳೇ ವಿರೋಧಿಸಿದ್ದರಿಂದ ಆಯೋಗಕ್ಕೆ ಈ ನಿಲುವು ಕೈಗೊಳ್ಳುವುದು ಅನಿವಾರ್ಯವಾಗಿದೆ.
ಲಖನೌದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಆಯುಕ್ತರು, ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಮ್ಮನ್ನು ಭೇಟಿಯಾಗಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ನಿಗದಿಯಾಗಿರುವ ಸಮಯದಲ್ಲೇ ಚುನಾವಣೆ ನಡೆಸಲು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಂತೆಯೇ ನಾವು ಮುಂದುವರಿಯಲಿದ್ದೇವೆ. ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ಡಯಾಬಿಟಿಸ್, ಕರೊನಾ ಸೋಂಕಿಗೆ ತುತ್ತಾದ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಮಾಡಿ ಕೊಡಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿರುವುದು ಮತ್ತು ಈಗಿರುವ ಕರೊನಾ ಪರಿಸ್ಥಿತಿಯಿಂದಾಗಿ ಮತ ದಾನದ ಬೂತ್ಗಳನ್ನು ಹೆಚ್ಚಿಸಲು ತೀರ್ವನಿಸಿರುವ ಆಯೋಗ, ಮತ ದಾನದ ಅವಧಿಯನ್ನೂ ಒಂದು ಗಂಟೆ ವಿಸ್ತರಿಸಲಿದೆ. ಹೆಚ್ಚುವರಿ 11 ಸಾವಿರ ವೋಟಿಂಗ್ ಬೂತ್ಗಳನ್ನು ಹೆಚ್ಚ ಲಿದ್ದು, ಬೂತ್ಗಳ ಸಂಖ್ಯೆ 171351ಕ್ಕೆ ಏರಲಿದೆ. ಇದುವರೆಗೆ, ಒಂದು ಬೂತ್ನಲ್ಲಿ 1500 ಮಂದಿ ಮತದಾನ ಮಾಡಬಹುದಿತ್ತು. ಈ ಚುನಾವಣೆಯಲ್ಲಿ ಆ ಸಂಖ್ಯೆ 1250ಕ್ಕೆ ತಗ್ಗಲಿದೆ.
ಕರೊನಾ ಕೇಸುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉ.ಪ್ರ. ಚುನಾವಣೆಯನ್ನು 2 ತಿಂಗಳಿಗೆ ಮುಂದೂಡುವುದು ಒಳ್ಳೆಯದು ಎಂದು ರಾಜ್ಯ ಹೈಕೋರ್ಟ್ನ ಏಕಸದಸ್ಯ ಪೀಠ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ವೇಳೆ ಅಭಿಪ್ರಾಯಪಟ್ಟಿತ್ತು. ಆದರೆ, ರಾಜಕೀಯ ಪಕ್ಷಗಳು ಮಾತ್ರ ಚುನಾವಣೆಯಲ್ಲಿ ಯಾವುದೇ ವಿಳಂಬವಿರಬಾರದು ಎಂದು ಸ್ಪಷ್ಟಪಡಿಸಿರುವುದರಿಂದ ಆಯೋಗ ಜನವರಿ ಮೊದಲ ವಾರದಲ್ಲಿ ಚುನಾವಣಾ ದಿನಾಂಕ ಘೊಷಿಸುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಶೇ.86ರಷ್ಟು ಮಂದಿಗೆ ಕರೊನಾ ಮೊದಲ ಲಸಿಕೆ ನೀಡಲಾಗಿದೆ. ಶೇ.49ರಷ್ಟು ಮಂದಿ ಎರಡನೇ ಲಸಿಕೆಯನ್ನೂ ಹಾಕಿಸಿಕೊಂಡಿದ್ದಾರೆ. ಮುಂದಿನ 15-20 ದಿನಗಳಲ್ಲಿ ಉಳಿದ ಅರ್ಹ ಜನವರ್ಗಕ್ಕೆ ಕರೊನಾ ಮೊದಲ ಲಸಿಕೆ ನೀಡುವ ಬಗ್ಗೆ ನಮಗೆ ಮಾಹಿತಿ ಒದಗಿಸಲಾಗಿದೆ. ಸದ್ಯ ರಾಜ್ಯದಲ್ಲಿ ಒಮಿಕ್ರಾನ್ ಕೇಸುಗಳು ಹೆಚ್ಚಾಗಿಲ್ಲ. ಪತ್ತೆಯಾದ ನಾಲ್ಕು ಕೇಸುಗಳಲ್ಲಿ ಮೂರು ಮಂದಿ ಗುಣಮುಖರಾಗಿದ್ದಾರೆ.