ಕೋಝಿಕ್ಕೋಡ್: ಸಿವಿಲ್ ಸಪ್ಲೈಸ್ ಕಾರ್ಪೋರೇಶನ್ ಅಂಕೆಯಲ್ಲಿರವ ಭಾರತ್ ಗ್ಯಾಸ್ ಔಟ್ ಲೆಟ್ ನಲ್ಲಿ 35 ವರ್ಷಗಳಿಂದಲೂ ಗ್ಯಾಸ್ ಸಿಲಿಂಡರ್ ವಿತರಣೆ ನಡೆಸುವ ಕಾರ್ಮಿಕರಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಎಸ್ ಐ)ಸಹಿತ ಸೌಲಭ್ಯಗಳು ಲಭಿಸುತ್ತಿಲ್ಲ ಎಂಬ ದೂರಿನ ಮೇರೆಗೆ ಸಮಗ್ರ ತನಿಖೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.
ಭಾರತ್ ಗ್ಯಾಸ್ ಔಟ್ ಲೆಟ್ ಮ್ಯಾನೇಜರ್, ಸಪ್ಲೈಕೋ ಡಿಪ್ಪೋ ಮ್ಯಾನೇಜರ್, ಸಪ್ಲೈಕೋ ರೀಜನಲ್ ಮ್ಯಾನೇಜರ್ ಎಂಬವರಿಗೆ 15 ದಿನಗಳೊಳಗೆ ಸಮರ್ಪಕ ಸಬೂಬು ನೀಡುವಂತೆ ಮಾನವ ಹಕ್ಕು ಆಯೋಗ ಸೂಚಿಸಿದೆ. ಫೆಬ್ರವರಿ 8 ರಂದು ಕೋಝಿಕ್ಕೋಡ್ ಕಲೆಕ್ಟರೇಟ್ ಕಾನ್ಪರೆನ್ಸ್ ಸಭಾಂಗಣದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ವಾದ ವಿವಾದ ಆಲಿಸುವಿಕೆ ನಡೆಯಲಿದೆ ಎಂದು ಆಯೋಗದ ನ್ಯಾಯಾಂಗ ಸದಸ್ಯ ಕೆ.ಎಸ್. ಬೈಜುನಾಥ ತಿಳಿಸಿದ್ದಾರೆ.
ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದು 2014ರ ಮಾರ್ಚ್ 1ರಂದು ನಿರ್ದೇಶನ ನೀಡಿದ್ದರೂ ಕನಿಷ್ಠ ವೇತನಕ್ಕೆ ಅವಕಾಶ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾನೂನಿನ ಪ್ರಕಾರ ರಜಾದಿನಗಳು ಮತ್ತು ಸಮವಸ್ತ್ರಗಳನ್ನು ಒದಗಿಸಲಾಗಿಲ್ಲ. ಕಾರ್ಮಿಕರಿಗೆ ಕಾನೂನು ರಕ್ಷಣೆ, ಕಾಯಂ ಉದ್ಯೋಗ ಮತ್ತು ವೇತನ ಶ್ರೇಣಿ ನೀಡಬೇಕು ಎಂದು ಕೋಝಿಕ್ಕೋಡ್ ಜಿಲ್ಲಾ ವಾಣಿಜ್ಯ ನೌಕರರ ಸಂಘದ ಕಾರ್ಯದರ್ಶಿ ಪಿ. ಸುಕುಮಾರನ್ ದೂರಿನಲ್ಲಿ ಕೋರಿದ್ದಾರೆ. ಈ ದೂರಿನಲ್ಲಿ ಆಯೋಗ ಇದೀಗ ಮಧ್ಯಪ್ರವೇಶಿಸಿದೆ.