ನವದೆಹಲಿ: ಧರ್ಮ ಸಂಸದ್ ಆಯೋಜನೆ ಮಾಡುವುದನ್ನು ಮತ್ತೊಂದು ಧರ್ಮದ ವಿರುದ್ಧ ಎಂದು ಪರಿಗಣಿಸುವಂತಿಲ್ಲ ಎಂದು ಹಿಂದೂ ಸೇನಾ ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಎಂಬ ಸಂಘಟನೆಗಳು ಹೇಳಿದ್ದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ನವದೆಹಲಿ ಹಾಗೂ ಹರಿದ್ವಾರಗಳಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ಇನ್ನಿತರರಿಗೆ ನೊಟೀಸ್ ಜಾರಿಗೊಳಿಸಿತ್ತು. ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿರುವ ಹಿಂದೂ ಸೇನಾ ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಸಂಘಟನೆಗಳು ತಮ್ಮನ್ನೂ ಈ ಪ್ರಕರಣದಲ್ಲಿ ವಾದಿಗಳನ್ನಾಗಿ ಪರಿಗಣಿಸಬೇಕು ಎಂದು ಮನವಿ ಸಲ್ಲಿಸಿವೆ.
ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಲಾಗಿದೆ ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿ ಪಿಐಎಲ್ ಸಲ್ಲಿಸಿದ್ದ ಪತ್ರಕರ್ತ ಕುರ್ಬಾನ್ ಅಲಿ, ಪಾಟ್ನ ಹೈಕೋರ್ಟ್ ನ ಮಾಜಿ ನ್ಯಾಯಾಧೀಶರು ಹಾಗೂ ಹಿರಿಯ ಅಡ್ವೊಕೇಟ್ ಅಂಜನ ಪ್ರಕಾಶ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ. ಎನ್ ವಿ ರಮಣ ಜ.12 ರಂದು ಕೇಂದ್ರ, ಉತ್ತರಾಖಂಡ್ ಹಾಗೂ ದೆಹಲಿ ಪೊಲೀಸರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದರು.
ಇದಕ್ಕೆ ಮಧ್ಯಪ್ರವೇಶದ ಅರ್ಜಿ ಸಲ್ಲಿಸಿರುವ ಎರಡು ಹಿಂದೂ ಸಂಘಟನೆಗಳು ಹಿಂದೂ ಸಮುದಾಯ ಹಾಗೂ ಅದರ ದೇವರುಗಳನ್ನು ಅವಹೇಳನ ಮಾಡಿರುವ ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ತಾಕೀರ್ ರಾಜ, ಸಾಜಿದ್ ರಶ್ದಿ, ಅಮಾನತ್ಉಲ್ಲಾ-ಖಾನ್, ವಾರೀಸ್ ಪಠಾಣ್ ಸೇರಿದಂತೆ ಇನ್ನೂ ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದೂ ಕೋರಿದೆ.
ಹಿಂದೂ ಧರ್ಮವನ್ನು ಅವಹೇಳನ ಮಾಡಿರುವವರ ವಿರುದ್ಧವೂ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡಬೇಕೆಂದು ಹಿಂದೂ ಪರ ಸಂಘಟನೆಗಳ ವಕೀಲರು ಮನವಿ ಮಾಡಿದ್ದಾರೆ.
"ದೇಶದ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯವಿದೆ. ಆದ್ದರಿಂದ ಹಿಂದೂಗಳು ಧರ್ಮ ಸಂಸದ್ ಆಯೋಜನೆ ಮಾಡುವುದಕ್ಕೆ ಸಂವಿಧಾನವೇ ರಕ್ಷಣೆ ನೀಡಿದೆ. ಧರ್ಮ ಸಂಸದ್ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವವರು ಮುಸ್ಲಿಂ ಸಮುದಾಯದವರಾಗಿದ್ದು, ಇಸ್ಲಾಮ್ ನ ಅನುಯಾಯಿ ಹಿಂದೂ ಧರ್ಮದ ವ್ಯವಹಾರಗಳು, ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಬಾರದು, ವಾಸ್ತವದಲ್ಲಿ ಹಿಂದೂ ಧರ್ಮದ ನಾಯಕರನ್ನು ದೂಷಿಸುವುದಕ್ಕಾಗಿಯೇ ಈ ಪಿಐಎಲ್ ಸಲ್ಲಿಸಲಾಗಿದೆ" ಎಂದು ಹಿಂದೂ ಸಂಘಟನೆಗಳು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದು ಹಿಂದೂ ಆಧ್ಯಾತ್ಮಿಕ ನಾಯಕರು ಧರ್ಮ ಸಂಸದ್ ಆಯೋಜನೆ ಮಾಡುವುದನ್ನು ಬೇರೊಂದು ಧರ್ಮದ ವಿರುದ್ಧ ಎಂದು ಪರಿಗಣಿಸಬಾರದು ಎಂದು ಹೇಳಿದೆ.