ಕಾಸರಗೋಡು: ಕೋವಿಡ್ ವ್ಯಾಪಿಸುತ್ತಿರುವ ಹೆಸರಲ್ಲಿ ಅವೈಜ್ಞಾನಿಕ ರೀತಿಯಲ್ಲಿ ವ್ಯಾಪಾರಿ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸುವುದನ್ನು ವಿರೋಧಿಸುವುದಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಅಪ್ಸರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಪ್ರತಿರೋಧ, ಜಿಎಸ್‍ಟಿ, ಹೆದ್ದಾರಿ ಅಭಿವೃದ್ಧಿ, ಕೆ-ರೈಲು ಯೋಜನೆಗಳಿಂದ ವ್ಯಾಪಾರಿಗಳೇ ಹೆಚ್ಚಿನ ಸಂಕಷ್ಟ ಅನುಭವಿಸುವಂತಾಗಿದೆ. ಕೋವಿಡ್ ಹೆಸರಲ್ಲಿ ಅಂಗಡಿಗಳನ್ನು ಮುಚ್ಚುವುದು, ನಿಯಂತ್ರಣ ಬಿಗುಗೊಳಿಸುವುದರಿಂದ ಕೋವಿಡ್ ತಗ್ಗಿಸುವಲ್ಲಿ ಹೆಚ್ಚಿನ ಪರಿಣಾಮ ಉಂಟಾಗಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ರೋಗಪ್ರತಿರೋಧ ವ್ಯಾಕ್ಸಿನ್ ವಿತರಣೆ, ರೋಗ ಹರಡುವ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಮುಂತಾದ ಕ್ರಮಗಳಿಂದ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ. ಕೋವಿಡ್ ಸಂದಿಗ್ಧತೆಯಿಂದ ಪಾರಾಗುವ ಹಂತ ತಲುಪುತ್ತಿದ್ದಂತೆ ಜಿಎಸ್‍ಟಿ ಹೆಸರಲ್ಲಿ ಅಧಿಕಾರಿಗಳ ಶೋಷಣೆ ಹೆಚ್ಚಾಗತೊಡಗಿದೆ. ಇದನ್ನು ಮುಂದುವರಿಸಿದರೆ ವ್ಯಾಪಾರಿಗಳು ಸಂಘಟಿತ ಹೋರಾಟಕ್ಕೆ ಅಣಿಯಾಗಬಕಾದಿತು ಎಂದು ತಿಳಿಸಿದ್ದಾರೆ. ಹೆದ್ದಾರಿ ಅಭಿವೃದ್ಧಿಯಿಂದ ಅಂಗಡಿ ತೆರವುಗೊಂಡವರಿಗೆ ಸರ್ಕಾರ ಘೋಷಿಸಿದ ಪರಿಹಾರ ಶೀಘ್ರ ವಿತರಿಸಬೇಕು, ಕೆ-ರೈಲು ಯೋಜನೆಯಲ್ಲಿ ಸುಳ್ಳು ಭರವಸೆ ನೀಡಿ ವ್ಯಾಪಾರಿಗಳನ್ನು ವಂಚಿಸುವುದರಿಂದ ಸರ್ಕಾರ ಹಿಂದೆ ಸರಿಯುವಂತೆಯೂ ಅವರು ತಿಳಿಸಿದ್ದಾರೆ.