ಕೊಚ್ಚಿ: ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಸೇರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‍ನ ವಿಭಾಗೀಯ ಪೀಠ ಸೋಮವಾರ ತಿರಸ್ಕರಿಸಿದೆ. ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಚಿತ್ರ ಸೇರಿಸಿರುವುದನ್ನು ಎತ್ತಿ ಹಿಡಿದ ಏಕ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಪ್ರಧಾನಿ ಪೋಟೋವನ್ನು ಸೇರಿಸಿರುವುದನ್ನು ಜಾಹೀರಾತು ಎಂಬಂತೆ ಪರಿಗಣಿಸುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.
ಕರೋನಾ ಲಸಿಕೆ ಬಗ್ಗೆ ಸಂದೇಶ ನೀಡುವ ಹಕ್ಕು ಪ್ರಧಾನಿಗೆ ಇದೆ. ಇದು ಎಂದಿಗೂ ಪ್ರಚಾರ ಅಥವಾ ಜಾಹೀರಾತು ಆಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಅರ್ಜಿದಾರರು ಕೊಟ್ಟಾಯಂನ ಕಡುತುರುತಿ ಮೂಲದ ಪೀಟರ್ ಮಲಿಪ್ಪರಂಬಿಲ್ ಎಂಬವರು. ಅವರ ಮನವಿಯನ್ನು ಈ ಹಿಂದೆ ಏಕ ಪೀಠ ತಿರಸ್ಕರಿಸಿ, 1 ಲಕ್ಷ ದಂಡ ವಿಧಿಸಿತ್ತು. ಈ ಅರ್ಜಿಯನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿತ್ತು. ಜನರು ಚುನಾವಣೆಯ ಮೂಲಕ ಅರ್ಹ ವ್ಯಕ್ತಿಯನ್ನು ಸಂಸತ್ತಿಗೆ ಕರೆತರುತ್ತಾರೆ. ಈ ಪೈಕಿ ಬಹುಮತ ಪಡೆದ ಪಕ್ಷ ಪ್ರಧಾನಿಯನ್ನು ಆಯ್ಕೆ ಮಾಡುತ್ತದೆ. ಅವರು ದೇಶದ ಪ್ರಧಾನಿ. ಇದು ಮುಂದಿನ ಚುನಾವಣೆವರೆಗೂ ಮುಂದುವರಿಯಲಿದೆ. ಪ್ರಧಾನಿಯನ್ನು ಗೌರವಿಸುವ ಜವಾಬ್ದಾರಿ ನಾಗರಿಕರ ಮೇಲಿದೆ ಎಂದು ನ್ಯಾಯಮೂರ್ತಿ ಪಿವಿ ಕುಂಞ ಕೃಷ್ಣನ್ ಹೇಳಿದ್ದರು.