ನವದೆಹಲಿ:ದಿಲ್ಲಿ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ರಾಜಧಾನಿಯ ಹಂಸರಾಜ್ ಕಾಲೇಜು ಈ ಶೈಕ್ಷಣಿಕ ವರ್ಷದಲ್ಲಿ ಗೋ ಸಂರಕ್ಷಣಾ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿ ಗಮನ ಸೆಳೆದಿದೆ ಜೊತೆಗೆ ವಿವಾದವನ್ನೂ ಸೃಷ್ಟಿಸಿದೆ.
ಸ್ವಾಮಿ ದಯಾನಂದ ಸರಸ್ವತಿ ಗೋ ಸಂವರ್ಧನ ಏವಂ ಅನುಸಂಧಾನ್ ಕೇಂದ್ರ ಎಂಬ ಹೆಸರಿನ ಈ ನೂತನ ಕೇಂದ್ರವನ್ನು ಒಂದು ಗೋವಿನೊಂದಿಗೆ ಆರಂಭಿಸಲಾಗಿದ್ದು, ಇಲ್ಲಿ ನಡೆಸಲಾಗುವ ಸಂಶೋಧನೆ ಪ್ರಯೋಜನಕಾರಿ ಎಂದು ಸಾಬೀತಾದಲ್ಲಿ ಕೇಂದ್ರವನ್ನು ವಿಸ್ತರಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ರಮಾ ಹೇಳಿದ್ದಾರೆ.
ಈ ಕೇಂದ್ರವು ಗೋವಿನ ಕುರಿತು ಸಂಶೋಧನೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಮತ್ತು ಕ್ಯಾಂಪಸ್ಸಿನಲ್ಲಿ ಪ್ರತಿ ತಿಂಗಳು ನಡೆಯುವ ಹವನಕ್ಕಾಗಿ ಶುದ್ಧ ಹಾಲು ಮತ್ತು ತುಪ್ಪವನ್ನೂ ಒದಗಿಸಲಿದೆ ಎಂದು ಆಕೆ ಹೇಳಿದ್ದಾರೆ.
ಕಾಲೇಜಿನ ಡಿಎವಿ ಟ್ರಸ್ಟ್ ಆರ್ಯ ಸಮಾಜದ ಮೇಲೆ ನಂಬಿಕೆಯಿರಿಸಿರುವುದರಿಂದ ಅದರ ಪದ್ಧತಿಯಂತೆ ಪ್ರತಿ ತಿಂಗಳು ಹವನ ನಡೆಸಲಾಗುತ್ತದೆ. ಆ ತಿಂಗಳು ಯಾರ ಜನ್ಮದಿನವಿರುತ್ತದೆಯೋ ಅವರನ್ನು ಸನ್ಮಾನಿಸಲಾಗುತ್ತದೆ. ಈ ಹವನಕ್ಕಾಗಿ ಬೇಕಾಗುವ ಶುದ್ಧ ತುಪ್ಪವನ್ನು ಇನ್ನು ನಾವೇ ಪೂರೈಸಬಹುದು ಎಂದು ಅವರು ಹೇಳಿದ್ದಾರೆ.
ಪುರುಷರ ಹಾಸ್ಟೆಲ್ ಸಮೀಪ ಇರುವ ಕಾಲೇಜು ಗೇಟಿನ ಪಕ್ಕದಲ್ಲಿ ಗೋ ಕೇಂದ್ರ ಆರಂಭಗೊಂಡಿದೆ. ಕಾಲೇಜು ಗೋಬರ್ ಗ್ಯಾಸ್ ಸ್ಥಾವರ ಸ್ಥಾಪಿಸುವ ಉದ್ದೇಶವನ್ನೂ ಹೊಂದಿದೆ. ಹಾಸ್ಟೆಲ್ ತೆರೆದುಕೊಂಡಾಗ ವಿದ್ಯಾರ್ಥಿಗಳಿಗೆ ಶುದ್ಧ ಹಾಲು, ತುಪ್ಪ, ಮೊಸರು ದೊರೆಯಲಿದೆ ಎನ್ನಲಾಗಿದೆ.
ಗೋ ಕೇಂದ್ರ ಸ್ಥಾಪಿಸಿದ ಕಾಲೇಜಿನ ಕ್ರಮ ಎಲ್ಲರಿಗೂ ಖುಷಿ ನೀಡಿಲ್ಲ. ಕಾಲೇಜಿನ ಎಸ್‍ಎಫ್‍ಐ ಘಟಕ ಈ ಕುರಿತು ಪ್ರತಿಕ್ರಿಯಿಸಿ ಮಹಿಳಾ ಹಾಸ್ಟೆಲಿಗೆ ಮೀಸಲಿರಿಸಿದ ಜಾಗದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಆರೋಪಿಸಿದೆ. ಈ ಕುರಿತಂತೆ ಮಾತನಾಡಿದ ಪ್ರಾಂಶುಪಾಲೆ, ಆ ಜಾಗ ಹಾಸ್ಟೆಲಿಗೆ ತೀರಾ ಚಿಕ್ಕದಾಗಿದೆ. ಮೇಲಾಗಿ ಅದು ಹಾಸ್ಟೆಲಿಗೆಂದು ಮೀಸಲಿರಿಸಲಾಗಿರಲಿಲ್ಲ ಎಂದಿದ್ದಾರೆ.